ಬೆಂಗಳೂರು, ಸೆ.19 www.bengaluruwire.com: ರಾಜ್ಯದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದ ಸ್ವತ್ತುಗಳಿಗೂ ಇ-ಸ್ವತ್ತು ವಿತರಿಸಲು ಸರಳೀಕೃತ ಪ್ರಕ್ರಿಯೆಯೊಂದಿಗೆ ‘ಇ-ಸ್ವತ್ತು-03’ ನೂತನ ತಂತ್ರಾಂಶ ಸಿದ್ಧಪಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ದಾಖಲೆ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಗಾಂಧಿ ಜಯಂತಿಯಾದ ಅಕ್ಟೋಬರ್ 2ರಿಂದಲೇ ಗ್ರಾಮಠಾಣಾ ಆಸ್ತಿಗಳ ಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದ್ದು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1ರಿಂದ ಕನಿಷ್ಠ 10 ಲಕ್ಷ ಫಲಾನುಭವಿಗಳಿಗೆ ಮನೆ ಬಾಗಿಲಿಗೇ ಇ-ಸ್ವತ್ತು ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಅರ್ಹತೆ ಮತ್ತು ನಿಬಂಧನೆಗಳು:
ವಿಸ್ತೀರ್ಣ ಮಿತಿ: ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಿತ್ತಲು ಮತ್ತು ಮನೆ ಅಂಗಳ ಸೇರಿದಂತೆ ಒಟ್ಟು 4,000 ಚದರ ಅಡಿ ವಿಸ್ತೀರ್ಣದ ಒಳಗಿರುವ ಸ್ವತ್ತುಗಳಿಗೆ ಮಾತ್ರ ಈ ಸೌಲಭ್ಯ ಅನ್ವಯ.

ಅಗತ್ಯ ಪರ್ಯಾಯ ದಾಖಲೆಗಳು: ಕ್ರಯಪತ್ರ ಅಥವಾ ಹಕ್ಕುಪತ್ರ ಇಲ್ಲದಿದ್ದರೂ, ವಿದ್ಯುತ್ ಬಿಲ್, ಹಳೆಯ ಮನೆ ತೆರಿಗೆ ರಸೀದಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಹಾಗೂ ಸ್ವಯಂ ಘೋಷಿತ ಅಫಿಡವಿಟ್ (ಮುಚ್ಚಳಿಕೆ ಪತ್ರ) ಸಲ್ಲಿಸಿ ಅರ್ಜಿ ಪಡೆಯಬಹುದು.
ಯಾರಿಗೆ ಸಿಗುವುದಿಲ್ಲ?: ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಆಸ್ತಿಗಳು, ಸರ್ಕಾರಿ ಜಾಗ, ಕೆರೆ ಅಂಗಳ, ಬಿ-ಖರಾಬು ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ವಿತರಿಸಲಾಗುವುದಿಲ್ಲ.
ಪಾರದರ್ಶಕ ಪರಿಶೀಲನಾ ಕ್ರಮ:
ನಕಲಿ ದಾಖಲೆ ಸೃಷ್ಟಿ ತಡೆಯಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಗ್ರಾಮಸಭೆಗಳನ್ನು ನಡೆಸಿ, ಸ್ಥಳೀಯರ ಸಮ್ಮುಖದಲ್ಲೇ ಅರ್ಜಿದಾರರ ವಾಸ್ತವ್ಯ ಮತ್ತು ನೈಜ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ ಪಂಚಾಯತಿ ಕಚೇರಿಗಳಲ್ಲಿ ಆಕ್ಷೇಪಣಾ ನೋಟಿಸ್ ಪ್ರಕಟಿಸಿ, 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಯಾವುದೇ ತಕರಾರು ಬಾರದಿದ್ದಲ್ಲಿ ನಿಯಮಾನುಸಾರ ಇ-ಸ್ವತ್ತು ಖಾತೆ ಮಂಜೂರು ಮಾಡಲಾಗುತ್ತದೆ.






















