ಬೆಂಗಳೂರು, ಸೆ.12 www.bengaluruwire.com: ಲೋಕೋಪಯೋಗಿ ಇಲಾಖೆಯ (PWD) ಟೆಂಡರ್ ಲಂಚದ ಹಣವನ್ನು ವಿದೇಶಕ್ಕೆ ಹವಾಲಾ ಮೂಲಕ ಸಾಗಿಸಿ ಆಫ್ರಿಕಾದಲ್ಲಿ ಚಿನ್ನದ ಗಣಿಗಳನ್ನು ಖರೀದಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿಯನ್ನು ಉಲ್ಲೇಖಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರೋಪಗಳ ತನಿಖೆ ಪೂರ್ಣಗೊಳ್ಳುವವರೆಗೂ ಸಚಿವ ಸತೀಶ್ ಜಾರಕಿಹೊಳಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ 21 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ ನಡೆಸಿ ₹3.3 ಕೋಟಿ ನಗದು ಮತ್ತು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ.
ಆರ್. ಅಶೋಕ್ ಪ್ರಸ್ತಾಪಿಸಿದ ಪ್ರಮುಖ ಆರೋಪಗಳು:

ಕಾಂಟ್ರಾಕ್ಟ್ ಲಂಚ ವಿದೇಶಕ್ಕೆ ರವಾನೆ: ಭರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ವಿವಿಧ ಗುತ್ತಿಗೆದಾರರಿಂದ ಸಂಗ್ರಹಿಸಿದ ಪಿಡಬ್ಲ್ಯೂಡಿ ಕಮಿಷನ್ ಹಣವನ್ನು ಅನಧಿಕೃತ ಮಾರ್ಗಗಳ ಮೂಲಕ ವಿದೇಶಿ ಆಸ್ತಿ ಖರೀದಿಗೆ ಬಳಸಲಾಗಿದೆ ಎಂಬುದು ಇಡಿ ತನಿಖೆಯಿಂದ ಬಯಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಕಾಂಗೋ ಚಿನ್ನದ ಗಣಿಯಲ್ಲಿ 40% ಪಾಲು: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿರುವ ‘ಮ್ಯಾಗ್ನಿಟ್ಯೂಡ್ ಸ್ಟಾರ್ SARL’ (Magnitude Star SARL) ಎಂಬ ಚಿನ್ನದ ಗಣಿಗಾರಿಕೆ ಕಂಪನಿಯಲ್ಲಿ ಸತೀಶ್ ಜಾರಕಿಹೊಳಿ ಶೇ. 40ರಷ್ಟು ಷೇರು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಟುಂಬಸ್ಥರ ಹೆಸರಿನಲ್ಲಿ ಗಣಿಗಾರಿಕೆ:
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಸಹೋದರಿ ಮಹಾದೇವಿ ಮಂಜುನಾಥ್ ಅವರ ಹೆಸರಿನಲ್ಲಿ ಕಾಂಗೋದ ‘ಎಲ್ಡೊರಾಡೊ ಮೈನಿಂಗ್’ ಮತ್ತು ಜಾಂಬಿಯಾದ ‘ನವ ಔರಂ ಮೈನಿಂಗ್’ ಕಂಪನಿಗಳಲ್ಲಿ ವಿದೇಶಿ ಹೂಡಿಕೆಗಳು ಕಂಡುಬಂದಿವೆ ಎಂದು ಉಲ್ಲೇಖಿಸಿದ್ದಾರೆ.
ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹ: “ಕರ್ನಾಟಕದ ಸಾರ್ವಜನಿಕರ ಹಣ ಯಾರದ್ದೋ ವೈಯಕ್ತಿಕ ಆಸ್ತಿಯಾಗಲು ಬಿಡುವುದಿಲ್ಲ. ಹಣ ಎಲ್ಲಿಂದ ಬಂತು? ಯಾರು ಸಂಗ್ರಹಿಸಿದರು? ಯಾರು ವಿದೇಶಕ್ಕೆ ಕಳುಹಿಸಿದರು? ಅಂತಿಮವಾಗಿ ಲಾಭ ಪಡೆದವರು ಯಾರು? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು” ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಇಡಿ ದಾಳಿ ಹಾಗೂ ಪ್ರತಿಪಕ್ಷಗಳ ಮುಗಿಬೀಳುವಿಕೆಯಿಂದಾಗಿ ರಾಜ್ಯ ರಾಜಕೀಯದಲ್ಲಿ ಆಫ್ರಿಕಾ ಮೈನಿಂಗ್ ಹೂಡಿಕೆ ವಿಚಾರ ಭಾರೀ ಸಂಚಲನ ಮೂಡಿಸಿದೆ.


















