ಬೆಂಗಳೂರು, ಸೆ.11 www.bengaluruwire.com: ರಸ್ತೆ ಗುಂಡಿಗಳಿಗೆ ಹೆಸರುವಾಸಿಯಾಗಿರುವ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೊಸ ಪ್ರಯೋಗ ಆರಂಭವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಕೇಂದ್ರ ನಗರ ಪಾಲಿಕೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ‘ಅಡ್ವಾನ್ಸ್‌ಡ್ ಜೆಟ್ ಪ್ಯಾಚರ್’ ತಂತ್ರಜ್ಞಾನಕ್ಕೆ ₹2 ಕೋಟಿ ವೆಚ್ಚದಲ್ಲಿ ಪ್ರಾಯೋಗಿಕ ಚಾಲನೆ ನೀಡಲಾಗಿದೆ.
ವಿಧಾನಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ನಡುವಿನ ರಸ್ತೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಈ ಪ್ರಾತ್ಯಕ್ಷಿಕೆ ಆಡಳಿತ ಮಟ್ಟದಲ್ಲಿ ಹೊಸ ಭರವಸೆ ಹುಟ್ಟಿಸಿರಬಹುದು. ಆದರೆ ನಗರದ ಕಟು ವಾಸ್ತವಗಳ ನೆಲೆಯಲ್ಲಿ ನೋಡಿದರೆ ಇದು ಬಿಲ್ಡಪ್ ಜಾಸ್ತಿ, ರಿಸಲ್ಟ್ ಕಮ್ಮಿ ಎನ್ನುವಂತಿದೆ.
ಸಣ್ಣ ಗುಂಡಿಗಳಿಗೆ ಮಾತ್ರ ಸೀಮಿತ: ದೊಡ್ಡ ಹಳ್ಳಗಳಿಗೆ ಪರಿಹಾರವೇನು?:
ಖುದ್ದು ಸಚಿವರೇ ಒಪ್ಪಿಕೊಂಡಿರುವಂತೆ, ಈ ಜೆಟ್ ಪ್ಯಾಚರ್ ಯಂತ್ರ ಕೇವಲ 50 ಮಿ.ಮೀ (2-3 ಇಂಚು) ಆಳದ, ಕೇವಲ ಮೇಲ್ಪದರದ ಡಾಂಬರು ಕಿತ್ತುಹೋದ ಸಣ್ಣ ಗುಂಡಿಗಳನ್ನು ಮಾತ್ರ ಮುಚ್ಚಲು ಸಾಧ್ಯ. ಆದರೆ, ಬೆಂಗಳೂರಿನ ಬಹುತೇಕ ಒಳರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಇರುವುದು 2 ಇಂಚಿನ ಗುಂಡಿಗಳಲ್ಲ; ಬದಲಾಗಿ 1 ರಿಂದ 2 ಅಡಿ ಆಳದ ಬೃಹತ್ ಕಂದಕಗಳು. ಜಲ್ಲಿ ಮತ್ತು ತಳಪಾಯವೇ ಕಿತ್ತುಹೋಗಿರುವ ಇಂತಹ ಆಳವಾದ ಗುಂಡಿಗಳನ್ನು ಈ ₹2 ಕೋಟಿಯ ಯಂತ್ರ ಮುಟ್ಟಲೂ ಸಾಧ್ಯವಿಲ್ಲ. ಹಾಗಾದರೆ ನಗರದ ಅತಿ ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಿಗೆ ಪಾಲಿಕೆ ನೀಡುವ ಪರಿಹಾರವೇನು ಎಂಬ ಪ್ರಶ್ನೆ ಎದುರಾಗುತ್ತದೆ.

ಹಳೆಯ ‘ಪೈಥಾನ್’ ವಿಫಲತೆ ಮರೆತ ಪಾಲಿಕೆ:
ಬೆಂಗಳೂರು ಮಹಾನಗರಕ್ಕೆ ರಸ್ತೆ ಗುಂಡಿ ಮುಚ್ಚುವ ಯಂತ್ರಗಳ ಪ್ರಯೋಗ ಹೊಸದೇನಲ್ಲ. ಈ ಹಿಂದೆ ಕೋಟ್ಯಂತರ ರೂಪಾಯಿ ಸುರಿದು ‘ಪೈಥಾನ್’ ಯಂತ್ರಗಳನ್ನು ತರಲಾಗಿತ್ತು. ಅಂತಿಮವಾಗಿ ಆ ಯೋಜನೆ ಹಳ್ಳಹಿಡಿದು, ಗುತ್ತಿಗೆದಾರರ ಜೇಬು ತುಂಬಿದ್ದೇ ಬಂತು ಹೊರತು ರಸ್ತೆಗಳು ಸುಧಾರಿಸಲಿಲ್ಲ. ಈಗ ಅದೇ ಹಳೆಯ ವೈನ್ ಅನ್ನು ಹೊಸ ಬಾಟಲಿಯಲ್ಲಿ ತರುವಂತೆ ‘ಜೆಟ್ ಪ್ಯಾಚರ್’ ಹೆಸರಿನಲ್ಲಿ ಮತ್ತೊಂದು ದುಬಾರಿ ಟೆಂಡರ್ ಕರೆಯಲಾಗಿದೆ.
ಗುಣಮಟ್ಟವಿಲ್ಲದ ಡಾಂಬರೀಕರಣ, ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳದ ಆಡಳಿತ, ರಸ್ತೆ ಕಿತ್ತುಹೋದ ಮೇಲೆ ಮುಚ್ಚಲು ಹೊಸ ಹೊಸ ಮಷಿನ್‌ಗಳ ಮೊರೆ ಹೋಗುತ್ತಿರುವುದು ತೆರಿಗೆದಾರರ ಹಣದ ಪೋಲಲ್ಲದೆ ಮತ್ತಿನ್ನೇನು ಎನ್ನುವ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ.
ತಾಂತ್ರಿಕ ಗುಣಮಟ್ಟ ಮತ್ತು ನಿರ್ವಹಣೆಯ ಸವಾಲುಗಳು:
ವೆಟ್ ಮಿಕ್ಸ್ ಬಾಳಿಕೆ: ಕೋಲ್ಡ್ ಮಿಕ್ಸ್ ಹಾಗೂ RS1 ಬಿಟ್ಯುಮೆನ್ ಎಮಲ್ಷನ್ ಬಳಸಿ 10 ನಿಮಿಷದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ನಿರಂತರ ಮಳೆ ಮತ್ತು ಭಾರಿ ವಾಹನಗಳ ಒತ್ತಡಕ್ಕೆ ಈ ಪ್ಯಾಚ್ ಎಷ್ಟು ದಿನ ಗಟ್ಟಿಯಾಗಿ ನಿಲ್ಲುತ್ತದೆ ಎಂಬ ಪರೀಕ್ಷೆ ಇನ್ನೂ ನಡೆದಿಲ್ಲ.
ಟ್ರಾಫಿಕ್ ಸಮಸ್ಯೆ: ಟ್ರಾಫಿಕ್ ನಡುವೆಯೇ 10 ನಿಮಿಷದಲ್ಲಿ ಕೆಲಸ ಮುಗಿಯುತ್ತದೆ ಎಂಬ ವಾದ ವಿಐಪಿ ರಸ್ತೆಗಳಲ್ಲಿ ಸುಲಭವಾಗಿರಬಹುದು. ಆದರೆ ಪೀಕ್ ಅವರ್‌ನಲ್ಲಿ ಕಿಕ್ಕಿರಿದು ಓಡಾಡುವ ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಅಥವಾ ಹೆಬ್ಬಾಳದಂತಹ ಕಡೆಗಳಲ್ಲಿ ಈ ಯಂತ್ರ ನಿಲ್ಲಿಸಿ ಕೆಲಸ ಮಾಡುವುದು ಸಂಚಾರ ದಟ್ಟಣೆಗೆ ಮತ್ತಷ್ಟು ತುಪ್ಪ ಸುರಿದಂತೆ.
ವಿಧಾನಸೌಧದ ಮುಂಭಾಗದ ನುಣುಪಾದ ರಸ್ತೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿ ತಂತ್ರಜ್ಞಾನವನ್ನು ಯಶಸ್ವಿ ಎಂದು ಘೋಷಿಸುವುದು ಸುಲಭ. ಆದರೆ ಈ ಯಂತ್ರದ ನೈಜ ಪರೀಕ್ಷೆ ನಡೆಯಬೇಕಿರುವುದು ಜಲಾವೃತಗೊಳ್ಳುವ, ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಬೆಂಗಳೂರಿನ ಹೊರವಲಯದ ರಸ್ತೆಗಳಲ್ಲಿ.
ಮೂಲದಲ್ಲೇ ಗುಣಮಟ್ಟದ ರಸ್ತೆ ನಿರ್ಮಿಸುವುದನ್ನು ಬಿಟ್ಟು, ಗುಂಡಿ ಬಿದ್ದ ಮೇಲೆ ಮುಚ್ಚಲು ಇಂತಹ ತಾತ್ಕಾಲಿಕ ಮುಲಾಮು ಹಚ್ಚುವ ಯೋಜನೆಗಳು ಕೇವಲ ಟೆಂಡರ್ ಪ್ರಕ್ರಿಯೆಗೆ ಸೀಮಿತವಾಗದೆ ಸಾಮಾನ್ಯ ಜನರಿಗೆ ನಿರಾಳತೆ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. For Video News: https://www.instagram.com/reel/DdJUGEgI1wN/?stkn=MXN0dnZweTRlM3R3Ng==

















