ನವದೆಹಲಿ, ಸೆ.12 www.bengaluruwire.com: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯು (ಸೆಪ್ಟೆಂಬರ್ 12 ಮತ್ತು 13) ಅದ್ಧೂರಿಯಾಗಿ ಆಯೋಜನೆಗೊಂಡಿದ್ದು, ಜಾಗತಿಕ ಮಟ್ಟದ ಪ್ರಮುಖ ನಾಯಕರು ಮತ್ತು ವಿದೇಶಿ ಗಣ್ಯರು ಭಾಗವಹಿಸುತ್ತಿದ್ದಾರೆ.
ಇಡೀ ನಗರವು ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗಿರುವ ಹೊತ್ತಿನಲ್ಲೇ, ನಗರದ ಬಡತನವನ್ನು ವಿದೇಶಿಗರ ಕಣ್ಣಿನಿಂದ ಮರೆಮಾಚಲು ಆಡಳಿತ ಮಂಡಳಿ ಕೊಳಗೇರಿಗಳಿಗೆ ಪರದೆ ಹಾಕಿರುವ ಕ್ರಮ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ದೆಹಲಿಯ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಸಂತ್ ವಿಹಾರ್ ಬಳಿಯ ‘ಕೂಲಿ ಕ್ಯಾಂಪ್’ ಕೊಳಗೇರಿಯನ್ನು ಮುಚ್ಚಲು ನೀಲಿ ಮತ್ತು ಬಿಳಿ ಬಣ್ಣದ ಉದ್ದನೆಯ ಶೀಟ್‌ಗಳನ್ನು ಅಳವಡಿಸಲಾಗಿದೆ. ವಿದೇಶಿ ಪ್ರತಿನಿಧಿಗಳು ಸಂಚರಿಸುವ ಪ್ರಮುಖ ಮಾರ್ಗವಾದ ನೆಲ್ಸನ್ ಮಂಡೇಲಾ ರಸ್ತೆಗೆ ಹೊಂದಿಕೊಂಡಿರುವ ಈ ಕೊಳಗೇರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.
ಆಡಳಿತದ ನಡೆಗೆ ನಿವಾಸಿಗಳ ತೀವ್ರ ವಿರೋಧ:

ಈ ಪರದೆಗಳನ್ನು ಹಾಕಿರುವ ಉದ್ದೇಶದ ಬಗ್ಗೆ ನಾಗರಿಕ ಆಡಳಿತ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಅಂತರರಾಷ್ಟ್ರೀಯ ಗಣ್ಯರ ಕಣ್ಣಿಗೆ ಭಾರತದ ಬಡತನ ಕಾಣಬಾರದು ಎಂಬ ಏಕೈಕ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಹಲವು ವಿರೋಧ ಪಕ್ಷಗಳು ಆರೋಪಿಸಿವೆ.
”ನಾವು ಕೊಳಕನ್ನು ಹರಡುವುದಿಲ್ಲ, ನಮ್ಮ ಪರಿಸರವನ್ನು ಸ್ವಚ್ಛವಾಗಿಯೇ ಇಟ್ಟುಕೊಂಡಿದ್ದೇವೆ. ಆದರೆ ಪ್ರತಿ ಬಾರಿ ಅಂತರರಾಷ್ಟ್ರೀಯ ಸಭೆಗಳು ನಡೆದಾಗಲೂ ನಮ್ಮನ್ನು ಹೀಗೆ ಮರೆಮಾಚಲಾಗುತ್ತದೆ” ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂಲಸೌಕರ್ಯಗಳನ್ನು ಕಲ್ಪಿಸಿ ಜೀವನಮಟ್ಟ ಸುಧಾರಿಸುವ ಬದಲು, ಪರದೆ ಹಾಕಿ ಕಣ್ಣೊರೆಸುವ ತಂತ್ರ ಅನುಸರಿಸಲಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ದಿನನಿತ್ಯದ ಬದುಕಿಗೆ ಹೊಡೆತ:
ಕೊಳಗೇರಿಯ ಸುತ್ತಲೂ ಪರದೆ ಮತ್ತು ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದರಿಂದ ದಿನಗೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ಅಂಗಡಿಕಾರರ ವ್ಯಾಪಾರ-ವಹಿವಾಟು ಸಂಪೂರ್ಣ ನೆಲಕಚ್ಚಿದೆ. ರಸ್ತೆ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ದಿನನಿತ್ಯದ ಉದ್ಯೋಗಕ್ಕೆ ಹೋಗಲು, ಆಸ್ಪತ್ರೆ ಹಾಗೂ ದಿನಸಿ ಸಾಮಗ್ರಿಗಳನ್ನು ತರಲು ಸ್ಥಳೀಯರು ಪರದಾಡುವಂತಾಗಿದೆ.
ಇತ್ತ ದೆಹಲಿ ಸಂಚಾರ ಪೊಲೀಸರು, ಗಣ್ಯರ ಭದ್ರತೆ ಹಾಗೂ ಓಡಾಟದ ಸಲುವಾಗಿ ಮುಖ್ಯ ರಸ್ತೆಗಳಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
2023ರ ಜಿ20 ನೆನಪಿಸಿದ ಘಟನೆ:
ದೆಹಲಿಯ ಕೊಳಗೇರಿ ನಿವಾಸಿಗಳಿಗೆ ಇಂತಹ ಅನುಭವ ಹೊಸದೇನಲ್ಲ. 2023ರ ಸೆಪ್ಟೆಂಬರ್‌ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲೂ ಇದೇ ವಸಂತ್ ವಿಹಾರ್ ಕೂಲಿ ಕ್ಯಾಂಪ್ ಸುತ್ತಲೂ ಹಸಿರು ಪರದೆಗಳನ್ನು ಹಾಕಿ ಮುಚ್ಚಲಾಗಿತ್ತು. ಪ್ರತಿ ಬಾರಿಯೂ ಜಾಗತಿಕ ಕಾರ್ಯಕ್ರಮಗಳು ನಡೆದಾಗ ನಗರವನ್ನು ‘ಸುಂದರ’ವಾಗಿ ತೋರಿಸಲು ಬಡ ಜನರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಟೀಕೆ ತೀವ್ರಗೊಂಡಿದೆ.


















