ಬೆಂಗಳೂರು, ಸೆ.11 www.bengaluruwire.com: ನಗರದ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಮತ್ತು ಕೊಳಚೆ ನೀರು ಸಂಸ್ಕರಣೆ ಇನ್ನಷ್ಟು ಚುರುಕುಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (BWSSB) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಗುರುವಾರ (ಸೆಪ್ಟೆಂಬರ್ 10, 2026) ನಗರದ ಪರಿಸರ ಭವನದ ತೇಜಸ್ವಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷರು ಭಾಗವಹಿಸಿ, ಬೆಂಗಳೂರಿನ ಪ್ರಸ್ತುತ ತ್ಯಾಜ್ಯ ನೀರು ನಿರ್ವಹಣೆಯ ಸಮಗ್ರ ಮಾಹಿತಿ ಒದಗಿಸಿದರು.
ದಿನಕ್ಕೆ 2,580 ಎಂಎಲ್‌ಡಿ ಕೊಳಚೆ ನೀರು ಉತ್ಪಾದನೆ:
ಜಲಮಂಡಳಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ಕಾವೇರಿ ಮತ್ತು ಬೋರ್‌ವೆಲ್ ಮೂಲಗಳಿಂದ ಒಟ್ಟು 2,825 ಎಂಎಲ್‌ಡಿ (MLD) ನೀರು ಸರಬರಾಜಾಗುತ್ತಿದ್ದು, ಪ್ರತಿದಿನ ಅಂದಾಜು 2,580 ಎಂಎಲ್‌ಡಿ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 37 ಎಸ್‌ಟಿಪಿಗಳ ಮೂಲಕ 1,364.5 ಎಂಎಲ್‌ಡಿ ನೀರನ್ನು ಮಾತ್ರ ಸಂಸ್ಕರಿಸಲಾಗುತ್ತಿದ್ದು, ಇನ್ನೂ 1,215.5 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣಾ ಕೊರತೆ (GAP) ಇದೆ.

ಈ ಕೊರತೆಯನ್ನು ನೀಗಿಸಲು ವಿವಿಧ ಯೋಜನೆಗಳಡಿ 1,147 ಎಂಎಲ್‌ಡಿ ಸಾಮರ್ಥ್ಯದ 42 ಹೊಸ ಎಸ್‌ಟಿಪಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಹಾಲಿ ಇರುವ ಘಟಕಗಳ ಉನ್ನತೀಕರಣದ ಮೂಲಕ ಹೆಚ್ಚುವರಿ 60 ಎಂಎಲ್‌ಡಿ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.
ಹೊಸ ಎಸ್‌ಟಿಪಿ ಘಟಕಗಳ ಡೆಡ್‌ಲೈನ್:
ನಿರ್ಮಾಣ ಹಂತದಲ್ಲಿರುವ 42 ಎಸ್‌ಟಿಪಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಜಲಮಂಡಳಿ ಯೋಜನೆ ರೂಪಿಸಿದೆ:
ಡಿಸೆಂಬರ್ 2026: 51 ಎಂಎಲ್‌ಡಿ ಸಾಮರ್ಥ್ಯದ 7 ಎಸ್‌ಟಿಪಿಗಳು.
ಡಿಸೆಂಬರ್ 2027: 413 ಎಂಎಲ್‌ಡಿ ಸಾಮರ್ಥ್ಯದ 17 ಎಸ್‌ಟಿಪಿಗಳು.
ಡಿಸೆಂಬರ್ 2028: 148 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿಗಳು.
ಡಿಸೆಂಬರ್ 2029: 535 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿಗಳು ಪೂರ್ಣಗೊಳ್ಳಲಿವೆ.
ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ನೀಡಿದ ಪ್ರಮುಖ ಸೂಚನೆಗಳು:
30 ದಿನಗಳ ಕಠಿಣ ಗಡುವು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಹಾಗೂ KSPCB ನಿಗದಿಪಡಿಸಿದ ಮಾನದಂಡಗಳಿಗೆ ತಕ್ಕಂತೆ ಕಾರ್ಯನಿರ್ವಹಿಸದ ಎಸ್‌ಟಿಪಿಗಳನ್ನು ಗುರುತಿಸಿ, ಮುಂದಿನ 30 ದಿನಗಳೊಳಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಚಿವರು ಜಲಮಂಡಳಿಗೆ ಎಚ್ಚರಿಕೆ ನೀಡಿದರು.
ಖಾಸಗಿ ಎಸ್‌ಟಿಪಿಗಳ ಪರಿಶೀಲನೆ: ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿರುವ ಖಾಸಗಿ ಎಸ್‌ಟಿಪಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು KSPCB ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಬೇಕು.
ರಾಜಕಾಲುವೆಗೆ ಕೊಳಚೆ ನೀರು ತಡೆ: ರಾಜಕಾಲುವೆಗಳಿಗೆ (SWD) ಹರಿಯುತ್ತಿರುವ ಕೊಳಚೆ ನೀರನ್ನು ತಪ್ಪಿಸಿ, ಮಿಸ್ಸಿಂಗ್ ಲೈನ್ ಕಾಮಗಾರಿ ನಡೆಸಿ ಸಂಸ್ಕರಣಾ ಘಟಕಗಳಿಗೆ ಸೇರಿಸಬೇಕು. ಹಾಳಾಗಿರುವ ಮ್ಯಾನ್‌ಹೋಲ್‌ಗಳನ್ನು ತಕ್ಷಣ ದುರಸ್ತಿಪಡಿಸಬೇಕು.
ಕೈಗಾರಿಕಾ ತ್ಯಾಜ್ಯದ ಮೇಲೆ ನಿಗಾ: ಪೀಣ್ಯ, ಜಿಗಣಿ ಸೇರಿದಂತೆ ನಗರದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಹರಿಯುವ ರಾಸಾಯನಿಕ ಮತ್ತು ಘನತ್ಯಾಜ್ಯದ ಬಗ್ಗೆ KSPCB ಮತ್ತು BWSSB ಜಂಟಿ ಪರಿಶೀಲನೆ ನಡೆಸಬೇಕು.
ಅಕ್ರಮ ಸಂಪರ್ಕಗಳಿಗೆ ಕಡಿವಾಣ: ಒಳಚರಂಡಿ ಮಾರ್ಗ ಲಭ್ಯವಿದ್ದರೂ ಸಂಪರ್ಕ ಪಡೆಯದ ಪ್ರದೇಶಗಳನ್ನು ಗುರುತಿಸಿ, ಅಕ್ರಮ ಒಳಚರಂಡಿ ಸಂಪರ್ಕಗಳನ್ನು ತಡೆದು ಸಾರ್ವಜನಿಕರಿಗೆ ಕಾನೂನುಬದ್ಧ ಸಂಪರ್ಕ ಕಲ್ಪಿಸಬೇಕು.


















