ಬೆಂಗಳೂರು, ಸೆ.08 www.bengaluruwire.com: ರಾಜಧಾನಿಯ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಲಪಡಿಸಲು ಮತ್ತು ಪ್ರಯಾಣಿಕರಿಗೆ ಸುಲಭ ಪ್ರಯಾಣದ ಅನುಭವ ನೀಡಲು ಬಿಎಂಟಿಸಿ ಕ್ರಮ ಕೈಗೊಂಡಿದೆ.
ಓಲಾ, ಊಬರ್ ಸೇರಿದಂತೆ ಇನ್ನಿತರೆ ಆ್ಯಪ್ ಆಧಾರಿತ ವಾಣಿಜ್ಯ ಪ್ರಯಾಣಿಕ ವಾಹನಗಳಿಗೂ ‘ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0’ ಲೈವ್ ಟ್ರ್ಯಾಕಿಂಗ್ ಸೌಲಭ್ಯವನ್ನು ಜೋಡಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಮಂಗಳವಾರ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಕ್ಯಾಬ್ ಇಳಿದ ತಕ್ಷಣ ಬಸ್ ಮಾಹಿತಿ ಲಭ್ಯ:

ಖಾಸಗಿ ಆ್ಯಪ್ ಆಧಾರಿತ ಕ್ಯಾಬ್, ಆಟೋಗಳಲ್ಲಿ ಸಂಚರಿಸುವ ಪ್ರಯಾಣಿಕರು ತಾವು ಇಳಿಯುವ ನಿಲ್ದಾಣ ಅಥವಾ ಸ್ಥಳದಿಂದ ಗಮ್ಯಸ್ಥಾನ ತಲುಪಲು ಲಭ್ಯವಿರುವ ಬಿಎಂಟಿಸಿ ಬಸ್‌ಗಳ ಸಂಚಾರದ ರಿಯಲ್-ಟೈಮ್ ಮಾಹಿತಿಯನ್ನು ಈ ಆ್ಯಪ್ ಮೂಲಕ ಸುಲಭವಾಗಿ ಪಡೆಯಬಹುದು. ಇದರಿಂದ ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಮೆಟ್ರೋ ನಿಲ್ದಾಣಗಳಿಗೆ 200 ಮಿನಿ ಎಸಿ ಫೀಡರ್ ಬಸ್‌ಗಳು:
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಸೇರ್ಪಡೆಯಾಗುತ್ತಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ, 200 ಮಿನಿ ಹವಾನಿಯಂತ್ರಿತ (ಎಸಿ) ಬಸ್‌ಗಳನ್ನು ಮೆಟ್ರೋ ರೈಲು ನಿಲ್ದಾಣಗಳ ಸಂಪರ್ಕಕ್ಕೆ ಮೀಸಲಿಡಲು ಸೂಚಿಸಲಾಗಿದೆ.
ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಈ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಬಡಾವಣೆಗಳ ಕಟ್ಟಕಡೆಯ ಭಾಗಗಳಿಂದ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣಗಳಿಗೆ ನೇರ ಸಂಪರ್ಕ ಸಿಗಲಿದೆ.
ಐಟಿ-ಬಿಟಿ ಕಾರಿಡಾರ್‌ಗಳಿಗೆ ಮತ್ತಷ್ಟು ಬಸ್ ಸೇವೆ:
ನಗರದ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಖಾಸಗಿ ವಾಹನಗಳ ಮೇಲಿನ ಅವಲಂಬನೆ ತಗ್ಗಿಸಲು ಬಿಎಂಟಿಸಿಯಿಂದ ಇನ್ನಷ್ಟು ಎಸಿ ಬಸ್‌ಗಳನ್ನು ನಿಯೋಜಿಸಲಾಗುವುದು. ಈ ಸಂಬಂಧ ಐಟಿ ಕಂಪನಿಗಳ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಮಾರ್ಗಗಳನ್ನು ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಇದೇ ವೇಳೆ ನಿಗಮಗಳಲ್ಲಿ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಆದಾಯ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.

















