ಬೆಂಗಳೂರು, ಸೆ.09 www.bengaluruwire.com: ಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ.
ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳಿಗೆ ಸ್ಪಷ್ಟನೆ ನೀಡಿರುವ ಅವರು, “ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ಪ್ರೊಫೆಸರ್ ಸಿ.ಎನ್. ರಾವ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಧಿಕಾರಿಗಳು ಖುದ್ದು ಮನೆಗೆ ತೆರಳಿ ಗೌರವಪೂರ್ವಕವಾಗಿ ಗಣತಿ ನಮೂನೆಗಳನ್ನು (Enumeration Forms) ತಲುಪಿಸಿ ಅಗತ್ಯ ಮಾಹಿತಿ ಭರ್ತಿ ಮಾಡಿಕೊಂಡಿದ್ದಾರೆ ಹೊರತು ಯಾವುದೇ ನೋಟಿಸ್ ನೀಡಿಲ್ಲ” ಎಂದು ತಿಳಿಸಿದ್ದಾರೆ.
ರಾಜ್ಯ ಸ್ವೀಪ್ (SVEEP) ನೋಡಲ್ ಅಧಿಕಾರಿ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಅವರು ಪ್ರೊ. ರಾವ್ ಅವರ ನಿವಾಸಕ್ಕೆ ತೆರಳಿ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಹೆಸರಿನ ವ್ಯತ್ಯಾಸ ಸರಿಪಡಿಸಲು ಕ್ರಮ: ಪ್ರೊ. ಸಿ.ಎನ್. ರಾವ್ ಅವರು 2002ರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 431ರಲ್ಲಿ ‘ರಾಮ’ ಎಂದು ನಮೂದಾಗಿದ್ದರು. ಪ್ರಸ್ತುತ 157-ಮಲ್ಲೇಶ್ವರಂ ಕ್ಷೇತ್ರದ ಮತದಾರರ ಪಟ್ಟಿಯ ಕ್ರಮ ಸಂಖ್ಯೆ 187ರಲ್ಲಿ ‘ಪ್ರೊಫೆಸರ್ ಸಿ.ಎನ್. ರಾವ್ ಎಂ’ ಎಂಬ ಹೆಸರಿನೊಂದಿಗೆ ನೋಂದಾಯಿತರಾಗಿದ್ದು, ಕರಡು ಪಟ್ಟಿಯಲ್ಲೂ ಹೆಸರು ಸೇರ್ಪಡೆಯಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿನ ವ್ಯತ್ಯಾಸ ಕಂಡುಬಂದಿದ್ದರೂ, ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಪಡೆದ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಬದಲಾಗಿ, ಗೌರವಪೂರ್ವಕವಾಗಿ ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಅಧಿಕೃತವಾಗಿ ಸೇರಿಸಲು ಶಿಫಾರಸು ಮಾಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

















