ಬೆಂಗಳೂರು, ಜು.30 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನ ಸೌಂದರ್ಯವನ್ನು ಹಾಳುಮಾಡುತ್ತಿರುವ ಪಾರಂಪರಿಕ ತ್ಯಾಜ್ಯ (Legacy Waste) ವಿಲೇವಾರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆ ಪ್ರಮುಖ ಹೆಜ್ಜೆ ಇಟ್ಟಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಆಗಸ್ಟ್ 1 ರಿಂದ ರಾಜಧಾನಿಯಾದ್ಯಂತ ಬೃಹತ್ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನ ಆರಂಭವಾಗಲಿದ್ದು, ಸ್ವತಃ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಈ ಅಭಿಯಾನವು ಸಂಪೂರ್ಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾನುಗಟ್ಟಲೆಯಿಂದ ಬಿದ್ದಿರುವ ಮಣ್ಣು, ಕಟ್ಟಡ ಭಗ್ನಾವಶೇಷಗಳು (C&D Waste), ಪೈಪ್‌ಗಳು ಹಾಗೂ ವಿದ್ಯುತ್ ಕಂಬಗಳಂತಹ ಪಾರಂಪರಿಕ ತ್ಯಾಜ್ಯ ತೆರವಿಗೆ ಮಾತ್ರ ಸೀಮಿತವಾಗಿರುತ್ತದೆ. ಗೃಹ ತ್ಯಾಜ್ಯದ ಬ್ಲಾಕ್ ಸ್ಪಾಟ್‌ಗಳನ್ನು ಮುಂದಿನ ಹಂತದಲ್ಲಿ ತೆರವುಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
1,616 ಸ್ಥಳಗಳಲ್ಲಿ ಕಸ ಗುರುತು: 100 ವಾಹನಗಳ ನಿಯೋಜನೆ:

ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ವಿವಿಧ ಇಲಾಖೆಗಳ ಖಾಲಿ ಜಾಗಗಳಲ್ಲಿ ಕಸ ಸುರಿಯುತ್ತಿರುವುದರಿಂದ ಇಲಿ, ಸೊಳ್ಳೆ, ಹಾವುಗಳ ಕಾಟ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಪ್ರಸ್ತುತ ನಗರದ 1,616 ಸ್ಥಳಗಳಲ್ಲಿ ಸುಮಾರು 22,000 ಟನ್ ಪಾರಂಪರಿಕ ತ್ಯಾಜ್ಯವನ್ನು ಗುರುತಿಸಲಾಗಿದೆ.
ಒಟ್ಟಾರೆ ನಗರದಲ್ಲಿ 1 ಲಕ್ಷ ಟನ್‌ಗಿಂತ ಹೆಚ್ಚು ತ್ಯಾಜ್ಯ ಇರುವ ಅಂದಾಜಿದೆ.
ಈ ಬೃಹತ್ ತೆರವು ಕಾರ್ಯಾಚರಣೆಗೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ 100ಕ್ಕೂ ಹೆಚ್ಚು ವಾಹನಗಳನ್ನು ನಿಯೋಜಿಸಲಾಗಿದೆ.
ಆಗಸ್ಟ್ 15ರ ಗಡುವು: ಖಾಲಿ ನಿವೇಶನ ಮಾಲೀಕರಿಗೆ ಎಚ್ಚರಿಕೆ:
ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಹಾಗೂ ತ್ಯಾಜ್ಯದಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿರುವ ಬಗ್ಗೆ ನೂರಾರು ದೂರುಗಳು ಬಂದಿವೆ. ಹೀಗಾಗಿ ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್ 15ರೊಳಗೆ ತಮ್ಮ ಜಾಗವನ್ನು ಸ್ವಯಂಪ್ರೇರಿತವಾಗಿ ಸ್ವಚ್ಛಗೊಳಿಸಬೇಕು. ಒಂದು ವೇಳೆ ತಪ್ಪಿದರೆ, ನಗರ ಪಾಲಿಕೆಯೇ ಸ್ವಚ್ಛಗೊಳಿಸಿ, ಆ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಿದೆ.
ಸಿ & ಡಿ (C&D) ತ್ಯಾಜ್ಯ ಸಾಗಿಸುವ ವಾಹನಗಳಿಗೆ ಜಿಪಿಎಸ್ ಕಡ್ಡಾಯ:
ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಎಲ್ಲೆಂದರಲ್ಲಿ ಸುರಿಯುವುದನ್ನು ತಡೆಯಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗುತ್ತಿದೆ.
ಕಟ್ಟಡ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಜಿಪಿಎಸ್ (GPS) ಅಳವಡಿಕೆ ಕಡ್ಡಾಯ.
ವಾಹನಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ನೋಂದಾಯಿತ ವಾಹನಗಳಿಗೆ ಮಾತ್ರ ತ್ಯಾಜ್ಯ ಸಾಗಿಸಲು ಅವಕಾಶ.
ಕಟ್ಟಡ ತ್ಯಾಜ್ಯ ವಿಲೇವಾರಿಗೆ ಅಧಿಕೃತ ಸಂಸ್ಥೆಯನ್ನು ನಿಯೋಜಿಸಲಾಗಿದ್ದು, ಪ್ರತಿ ಟನ್‌ಗೆ ₹760 ದರ ನಿಗದಿಪಡಿಸಲಾಗಿದೆ.
‘ಜಸ್ಟ್ ಕ್ಲೀನ್ ಬೆಂಗಳೂರು’ (JCB): ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆ:
ಬೆಂಗಳೂರನ್ನು ಕ್ಲೀನ್ ಸಿಟಿಯನ್ನಾಗಿ ಮಾಡಲು ಕೇವಲ ಅಧಿಕಾರಿಗಳ ಶ್ರಮ ಸಾಲದು. ಹೀಗಾಗಿ ‘ಜಸ್ಟ್ ಕ್ಲೀನ್ ಬೆಂಗಳೂರು (JCB)’ ಪರಿಕಲ್ಪನೆಯಡಿ ಸಾರ್ವಜನಿಕರು ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಸ್ವಚ್ಛಗೊಳಿಸಿದ ಜಾಗದಲ್ಲಿ ಮತ್ತೆ ಕಸ ಸುರಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.




















