ಬೆಂಗಳೂರು, ಏ.4 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಬೇಸಿಗೆಯ ಬಿಸಿಗೆ ಕಂಗಾಲಾಗಿದ್ದ ನಾಗರೀಕರಿಗೆ ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿಯಾಗಿದ್ದಾರೆ. ಇದರ ಮಧ್ಯೆ ಮಂಗಳವಾರ ಬೆಳಗ್ಗೆ 9ಕ್ಕೆ ಕೊನೆಗೊಂಡ ಮಾಪನದಲ್ಲಿ ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆ ಸಾಧಾರಣ ಮಳೆ ಅಥವಾ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ನಗರದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಿನ್ನೆ ನಗರದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿಯಷ್ಟು ಇದ್ದು ಬಿಸಿಲಿನಿಂದ ಜನರು ತತ್ತರಿಸಿದ್ದರು. ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿತ್ತು. ನಗರದಲ್ಲಿ ನಿನ್ನೆ ಒಟ್ಟಾರೆ 1 ಸೆ.ಮೀ ಮಳೆಯಾಗಿದೆ. ಇನ್ನು ಅಂತರರಾಷ್ಠ್ರೀಯ ವಿಮಾನ ನಿಲ್ದಾಣ (KIAL Airport)ದಲ್ಲಿ ಗರಿಷ್ಠ 35.3 ಹಾಗೂ ಕನಿಷ್ಠ 23.5 ತಾಪಮಾನ ದಾಖಲಾಗಿತ್ತು.

ಬೆಂಗಳೂರು ಹಳೆಯ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 32.8 ಡಿಗ್ರಿ ಹಾಗೂ ಕನಿಷ್ಠ 22 ಡಿಗ್ರಿ ಉಷ್ಣಾಂಶ ಸೋಮವಾರ ದಾಖಲಾಗಿತ್ತು.






















