ಬೆಂಗಳೂರು, ಏ.4 www.bengaluruwire.com : ನಗರದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದ ಆಚರಣೆಯಲ್ಲಿ ಮುಖ್ಯವಾದ ‘ಹಸಿ ಕರಗ’ ಉತ್ಸವವು ಇಂದು (ಏ.4) ತಡರಾತ್ರಿಯಿಂದ ನಾಳೆ ಬೆಳಗ್ಗೆವರೆಗೆ ಶ್ರದ್ಧಾ ಭಕ್ತಿಗಳಿಂದ ವೈಭವೋಪೇತವಾಗಿ ನೆರವೇರಲಿದೆ.
ಈ ವೇಳೆ ಸಾವಿರಾರು ಭಕ್ತರು ಬೆಳಗ್ಗೆ ತಾಯಿ ದ್ರೌಪದಿಯ ದರ್ಶನ ಪಡೆಯಲಿದ್ದಾರೆ. ಮಂಗಳವಾರ ರಾತ್ರಿಯಾದ ಇಂದು ಧರ್ಮರಾಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪೂಜಾರಿ ಮನೆತನದವರು ದೊಡ್ಡ ತೇರಿನ ಕಳಸಕ್ಕೆ ವಿಶೇಷ ಪೂಜೆ ಮಾಡಿ, ನಂತರ ದೇಗುಲದ ದೇವರ ಮೂರ್ತಿಗಳಿಗೆ ಅಲಂಕಾರ, ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ (ಗಾವನ್ನ) ನೆರವೇರಿಸಿ ಕಬ್ಬನ್ ಉದ್ಯಾನದಲ್ಲಿನ ಸಂಪಂಗಿರಾಮನಗರ ಕೆರೆಯಲ್ಲಿನ ಶಕ್ತಿ ಪೀಠಕ್ಕೆ ತೆರಳುತ್ತಾರೆ. ಇದಕ್ಕೂ ಮುನ್ನ ಇಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಂಪಂಗಿರಾಮನಗರ ಕೆರೆಯಲ್ಲಿನ ಶಕ್ತಿ ಪೀಠದಿಂದ ತಡರಾತ್ರಿ 3 ಗಂಟೆಗೆ ದ್ರೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡ ಮೆರವಣಿಗೆಯು ನೇರವಾಗಿ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ನೂತನವಾಗಿ ಜೀರ್ಣೋದ್ಧಾರ ಮಾಡಿರುವ ಆದಿಶಕ್ತಿ ದೇವಸ್ಥಾನ ತಲುಪಲಿದೆ. ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಬೆಳಗ್ಗೆ 6ಗಂಟೆ ವೇಳೆಗೆ ಧರ್ಮರಾಸ್ವಾಮಿ ದೇವಸ್ಥಾನ ಮೂರ್ತಿ ತರಲಾಗುತ್ತದೆ. ಆಗ ದ್ರೌಪದಮ್ಮ, ದೇವಸ್ಥಾನದ ಒಳಾಂಗಣ (ಗರ್ಭಗುಡಿ) ಮತ್ತು ಹೊರಾಂಗಣವನ್ನು ಒಂದು ಗಂಟೆಗೂ ಅಧಿಕ ಕಾಲ ಸುಮಾರು 10 ರಿಂದ 12 ಸುತ್ತು ಬರಲಿದೆ. ಈ ವೇಳೆ ಸಾವಿರಾರು ಭಕ್ತರು ತಾಯಿ ದರ್ಶನ ಪಡೆಯುವರು. ಅಲ್ಲಿಗೆ ’ಹಸೀ ಕರಗ’ ಆಚರಣೆ ಸಂಪನ್ನವಾಗಲಿದೆ.
ಈ ಬಾರಿ ಅದ್ದೂರಿಯಾಗಿ ಕರಗ ಉತ್ಸವ ನಡೆಸಲು ಧರ್ಮರಾಯ ದೇವಸ್ಥಾನದ ಉತ್ಸವ ಸಮಿತಿ ತೀರ್ಮಾನಿಸಿದ್ದು, ಅದರಂತೆ, ಏ.6ರ ಚೈತ್ರ ಮಾಸದ ಪೂರ್ಣಿಮೆಯಂದು ದ್ರೌಪದಿ ದೇವಿಯ ಹೂವಿನ ಕರಗ ಹಾಗೂ ಧರ್ಮರಾಯ ಸ್ವಾಮಿ ದೇವರ ರಥೋತ್ಸವ ನಡೆಯಲಿದೆ. ಕರಗ ಉತ್ಸವ ಪ್ರತಿ ಬಾರಿಯಂತೆ ಈ ಬಾರಿಯು ಪಕ್ಷಾತೀತವಾಗಿ ನಡೆಯಲಿದ್ದು, ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ತೆರಳಲಿದೆ. ಮೊದಲಿನಿಂದಲೂ ಇರುವ ಸಂಪ್ರದಾಯದಂತೆ ಕರಗ ನಡೆಯಲಿದ್ದು, ಕರಗ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಧರ್ಮರಾಯ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವವವನ್ನು ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ಕರಗ ಉತ್ಸವವನ್ನು ಸಾಧಾರಣವಾಗಿ ಆಚರಿಸಲಾಗಿತ್ತು. ಹೀಗಾಗಿ ಈ ಬಾರಿ ಅದ್ಧೂರಿ ಕರಗ ಮಹೋತ್ಸವ ಆಚರಣೆ ನಡೆಯುತ್ತಿದೆ.






















