ಬೆಂಗಳೂರು, ಸೆ.08 www.bengaluruwire.com: ಆರೋಗ್ಯದ ಕುರಿತ ವೈಜ್ಞಾನಿಕ ಅರಿವು ಕೇವಲ ವೈದ್ಯರ ಕೊಠಡಿಗೆ ಸೀಮಿತವಾಗದೆ ಪ್ರತಿಯೊಬ್ಬರ ಮನೆ-ಮನ ತಲುಪಬೇಕು ಎಂಬ ಉದ್ದೇಶದೊಂದಿಗೆ ನಗರದಲ್ಲಿ ಆಯೋಜಿಸಲಾಗಿದ್ದ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ರ ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ನೆರವೇರಿತು.
ಇದೇ ವೇದಿಕೆಯಲ್ಲಿ ನೂತನ ‘ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್’ ಹಾಗೂ ‘ಬೆಂಗಳೂರು ಹೆಲ್ತ್ ಫೌಂಡೇಶನ್’ಗೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವ್ಯವಸ್ಥಾಪಕರಾದ ಎನ್. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ತತ್ ಕ್ಷಣ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆಶಾಕಿರಣ್ ಪರಿಷತ್ ಹಾಗೂ ಫೌಂಡೇಶನ್‌ಗೆ ಚಾಲನೆ ನೀಡಿ, ಎಲ್ಲಾ ವೈದ್ಯಕೀಯ ಪದ್ಧತಿಗಳನ್ನು ಒಗ್ಗೂಡಿಸಿ ಸರಳ ಭಾಷೆಯಲ್ಲಿ ಆರೋಗ್ಯ ಮಾಹಿತಿ ತಲುಪಿಸುತ್ತಿರುವ ವೈದ್ಯಲೋಕ ಮತ್ತು ಹೆಲ್ತ್‌ವಿಷನ್ ಪ್ರಯತ್ನವನ್ನು ಶ್ಲಾಘಿಸಿದರು.
ಸಾಮಾಜಿಕ ಜಾಲತಾಣ, ಪುಸ್ತಕ ಮತ್ತು ಆರೋಗ್ಯ ಜಾಗೃತಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಸಾಹಿತಿ ಡಾ. ವಸುಂಧರಾ ಭೂಪತಿ, “ಪ್ರತಿ ತಿಂಗಳು ದಿನಸಿಗೆ ಬಜೆಟ್ ಇಡುವಂತೆ ಪುಸ್ತಕ-ನಿಯತಕಾಲಿಕೆಗಳಿಗೂ ಹಣ ಮೀಸಲಿಡುವ ಸಂಸ್ಕೃತಿ ಬೆಳೆಯಬೇಕು. ಯುವಜನರು ಸಾಮಾಜಿಕ ಜಾಲತಾಣಗಳನ್ನು ಆರೋಗ್ಯ ಜಾಗೃತಿಯ ಸಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ್ ನೆಗಳಗುಳಿ, “ಗೂಗಲ್‌ನಲ್ಲಿ ರೋಗಲಕ್ಷಣಗಳನ್ನು ನೋಡಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದು ಅಪಾಯಕಾರಿ; ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ” ಎಂದು ಎಚ್ಚರಿಸಿದರು. ಇದೇ ವೇಳೆ ನವಕರ್ನಾಟಕ ಪ್ರಕಾಶನದ ಯು. ಪ್ರೇಮಚಂದ್ರ ಹಾಗೂ ಲೇಖಕ ಎನ್.ವಿ. ರಮೇಶ್ ಓದುವ ಹವ್ಯಾಸದ ಮಹತ್ವವನ್ನು ವಿವರಿಸಿದರು.
ವೈದ್ಯಲೋಕದ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಮಾತನಾಡಿ, “ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮಾಧ್ಯಮಗಳನ್ನು ಬಳಸಿಕೊಂಡು ಮುಂದೆಯೂ ಇಂತಹ ಸೃಜನಾತ್ಮಕ ಸ್ಪರ್ಧೆಗಳನ್ನು ಮುಂದುವರಿಸಲಾಗುವುದು” ಎಂದರು.
ಗೌರವ ಮತ್ತು ಪ್ರಶಸ್ತಿ ವಿಜೇತರು:
ಆರೋಗ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಸುರೇಶ್ ನೆಗಳಗುಳಿ, ಡಾ. ವಸುಂಧರಾ ಭೂಪತಿ ಹಾಗೂ ಎನ್.ವಿ. ರಮೇಶ್ ಅವರಿಗೆ ‘ಆರೋಗ್ಯ ಸಾಹಿತ್ಯ ರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.
ಸುಮಾರು 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಪ್ರಮುಖ ವಿಜೇತರ ವಿವರ:
ಕಥಾ ಸ್ಪರ್ಧೆ (ಪ್ರಥಮ): ಡಾ. ನವೀನ್ ಎಲ್ಲಂಗಳ (ವೈದ್ಯರ ವಿಭಾಗ), ಎಸ್. ರಘುನಂದನ್ (ಸಾರ್ವಜನಿಕ ವಿಭಾಗ), ಡಾ. ಭವ್ಯ ಎಲ್. (ವೈದ್ಯಕೀಯ ವಿದ್ಯಾರ್ಥಿ ವಿಭಾಗ).
ಕವನ ಸ್ಪರ್ಧೆ (ಪ್ರಥಮ): ಡಾ. ಸುರೇಶ್ ನೆಗಳಗುಳಿ (ವೈದ್ಯರ ವಿಭಾಗ), ಡಾ. ಕೊಳ್ಚಪ್ಪೆ ಗೋವಿಂದ ಭಟ್ (ಸಾರ್ವಜನಿಕ ವಿಭಾಗ), ರವಿಕುಮಾರ್ ಎ.ಎಸ್. (ವಿದ್ಯಾರ್ಥಿ ವಿಭಾಗ).
ಮುಳಿಯ ಜ್ಯುವೆಲ್ಸ್ ಅಂಡ್ ಡೈಮಂಡ್ಸ್ ವತಿಯಿಂದ ಲಕ್ಕಿ ಡಿಪ್ ಆಯೋಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



















