ಬೆಂಗಳೂರು, ಸೆ.05 www.bengaluruwire.com: ನಮ್ಮ ಮೆಟ್ರೋ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ.
ನೇರಳೆ (Purple Line) ಮತ್ತು ಹಸಿರು (Green Line) ಮಾರ್ಗಗಳಲ್ಲಿ ಹೊಸದಾಗಿ ಆಗಮಿಸಿರುವ 6 ಬೋಗಿಗಳ ನಾಲ್ಕು ರೈಲುಗಳನ್ನು ವಾಣಿಜ್ಯ ಸೇವೆಗೆ ಇಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (BMRCL) ದಕ್ಷಿಣ ವಲಯದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಅಧಿಕೃತ ಹಸಿರು ನಿಶಾನೆ ತೋರಿದ್ದಾರೆ.
ಚೀನಾ ಮೂಲದ ಸಿಆರ್‌ಆರ್‌ಸಿ (CRRC) ಸಂಸ್ಥೆಯು ನಿರ್ಮಿಸಿರುವ ಅತ್ಯಾಧುನಿಕ ‘ಡಿಸ್ಟೆನ್ಸ್-ಟು-ಗೋ’ (Distance-to-Go – DTG) ಸಿಗ್ನಲಿಂಗ್ ತಂತ್ರಜ್ಞಾನ ಆಧಾರಿತ ಈ ರೈಲುಗಳು ಸುರಕ್ಷತಾ ತಪಾಸಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಪ್ರಸ್ತುತ ನಮ್ಮ ಮೆಟ್ರೋ ಡಿಪೋ ತಲುಪಿರುವ 4 ಹೊಸ ರೈಲುಗಳನ್ನು ಹಂತ ಹಂತವಾಗಿ ಪ್ರಯಾಣಿಕರ ಸೇವೆಗೆ ಬಿಡಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
ಪೀಕ್ ಅವರ್‌ನಲ್ಲಿ ಜನದಟ್ಟಣೆಗೆ ಮುಕ್ತಿ:

ಬೆಳಗ್ಗೆ ಮತ್ತು ಸಂಜೆಯ ಗರಿಷ್ಠ ಸಂಚಾರದ (Peak Hours) ಅವಧಿಯಲ್ಲಿ ಮೆಟ್ರೋ ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಉಂಟಾಗುತ್ತಿದ್ದ ತೀವ್ರ ಜನದಟ್ಟಣೆಯನ್ನು ನಿಯಂತ್ರಿಸಲು ಈ ಹೊಸ ರೈಲುಗಳು ನೆರವಾಗಲಿವೆ. ಹೆಚ್ಚುವರಿ ರೈಲುಗಳು ಲೈನ್ ಪ್ರವೇಶಿಸುವುದರಿಂದ ಟ್ರಿಪ್‌ಗಳ ಸಂಖ್ಯೆ ಹೆಚ್ಚಲಿದ್ದು, ಪ್ರಯಾಣಿಕರಿಗೆ ಕಾಯುವ ಸಮಯ ಗಣನೀಯವಾಗಿ ತಗ್ಗಲಿದೆ.
ಉಳಿದ 17 ರೈಲುಗಳು ಶೀಘ್ರದಲ್ಲೇ ಆಗಮನ:
ಒಟ್ಟು ಖರೀದಿ ಆದೇಶ ನೀಡಿದ 21 ರೈಲುಗಳ ಪೈಕಿ 4 ರೈಲುಗಳು ಈಗಾಗಲೇ ಬೆಂಗಳೂರು ತಲುಪಿವೆ. ಬಾಕಿ ಉಳಿದಿರುವ 17 ರೈಲುಗಳು ತಿಂಗಳಿಗೆ ಎರಡು ರೈಲುಗಳ ಅನುಪಾತದಲ್ಲಿ ನಿಯಮಿತವಾಗಿ ನಗರಕ್ಕೆ ತಲುಪಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಸ್ಪಷ್ಟಪಡಿಸಿವೆ. ಎಲ್ಲಾ ರೈಲುಗಳು ಹಂತ ಹಂತವಾಗಿ ಕಾರ್ಯಾಚರಣೆಗೆ ಇಳಿದ ಬಳಿಕ ಬೆಂಗಳೂರು ಮೆಟ್ರೋದ ಒಟ್ಟಾರೆ ಸಾರಿಗೆ ಸಾಮರ್ಥ್ಯದಲ್ಲಿ ಭಾರಿ ಸುಧಾರಣೆ ಕಂಡುಬರಲಿದೆ.


















