ಬೆಂಗಳೂರು, ಸೆ.03 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆ ನಿಯಂತ್ರಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.
2021ರ ಪಾರ್ಕಿಂಗ್ ನೀತಿಯಡಿ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ರಸ್ತೆ ಮೇಲಿನ ಪಾರ್ಕಿಂಗ್‌ಗೆ ಶುಲ್ಕ, ಖಾಲಿ ನಿವೇಶನಗಳ ಮಾಲೀಕರಿಗೆ ಆಸ್ತಿ ತೆರಿಗೆ ವಿನಾಯಿತಿ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಸ್ತಾಪಿಸಲಾಗಿದೆ.
1.5 ಕೋಟಿ ವಾಹನಗಳು: ರಸ್ತೆ ಸಂಚಾರಕ್ಕೆ ಭಾರೀ ಹೊರೆ:
ಬೆಂಗಳೂರಿನಲ್ಲಿ ಪ್ರಸ್ತುತ 1.28 ಕೋಟಿ ನೋಂದಾಯಿತ ವಾಹನಗಳ ಜತೆಗೆ ಹೊರಗಿನಿಂದ ಬರುವ ವಾಹನಗಳು ಸೇರಿದಂತೆ ಒಟ್ಟು 1.5 ಕೋಟಿಗೂ ಅಧಿಕ ವಾಹನಗಳು ಓಡಾಡುತ್ತಿವೆ. ವಾಹನಗಳು ತಮ್ಮ ಶೇ.95ರಷ್ಟು ಸಮಯವನ್ನು ರಸ್ತೆ ಅಥವಾ ಮನೆಗಳ ಮುಂದೆ ನಿಲುಗಡೆಗೆ ಬಳಸುತ್ತಿರುವುದರಿಂದ ನಗರದ ಪ್ರಮುಖ ರಸ್ತೆಗಳ ಸಂಚಾರ ಸಾಮರ್ಥ್ಯ ಶೇ.50ರಷ್ಟು ಕುಸಿಯುತ್ತಿದೆ. ಪೀಕ್ ಅವಧಿಯಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 15 ಕಿ.ಮೀ.ಗೆ ಇಳಿಕೆಯಾಗಿದ್ದು, ಬಸ್‌ಗಳ ವೇಗ 10 ಕಿ.ಮೀ.ಗೆ ಕುಸಿದಿದೆ.

ಕರಡು ನಿಯಮಗಳ ಪ್ರಮುಖ ಮುಖ್ಯಾಂಶಗಳು:
ಖಾಲಿ ನಿವೇಶನಗಳಿಗೆ ತೆರಿಗೆ ವಿನಾಯಿತಿ: ಖಾಸಗಿ ಖಾಲಿ ಜಾಗಗಳಲ್ಲಿ ಬಹುಹಂತದ ಪಾರ್ಕಿಂಗ್ (MLCP) ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಶೇ.100ರಷ್ಟು ಮತ್ತು ನೆಲ ಮಟ್ಟದ ಪಾರ್ಕಿಂಗ್‌ಗೆ ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
ವೈಜ್ಞಾನಿಕ ಶುಲ್ಕ ಆಧಾರಿತ ಪಾರ್ಕಿಂಗ್: ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು ರಸ್ತೆ ವರ್ಗೀಕರಣದ ಆಧಾರದ ಮೇಲೆ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗುತ್ತದೆ. ದಿನನಿತ್ಯ ಬಳಸುವವರಿಗೆ ಮಾಸಿಕ ಪಾಸ್ ಸೌಲಭ್ಯ ದೊರೆಯಲಿದೆ.
ರಸ್ತೆ ಬದಿ ಪಾರ್ಕಿಂಗ್ ನಿರ್ಬಂಧ: ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ‘ನೋ ಪಾರ್ಕಿಂಗ್’ ವಲಯ ರಚನೆ, ಪೀಕ್ ಅವಧಿಯಲ್ಲಿ ನಿರ್ಬಂಧ ಹಾಗೂ ದೀರ್ಘಾವಧಿ ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ.
ಕಟ್ಟಡ ನಿಯಮ ಉಲ್ಲಂಘನೆಗೆ ದಂಡ: ಕಟ್ಟಡದ ಪಾರ್ಕಿಂಗ್ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಅಥವಾ ಪಾರ್ಕಿಂಗ್ ಬಿಡದ ಮಾಲೀಕರ ವಿರುದ್ಧ ಪಾಲಿಕೆ ಮತ್ತು ಪೊಲೀಸರು ಜಂಟಿಯಾಗಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಆದಾಯ ಮರುಬಳಕೆ: ಪಾರ್ಕಿಂಗ್‌ನಿಂದ ಸಂಗ್ರಹವಾಗುವ ಆದಾಯವನ್ನು ರಸ್ತೆ, ಜಂಕ್ಷನ್ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ ಮೀಸಲಿಡಲಾಗುತ್ತದೆ.
ಸಾರ್ವಜನಿಕರ ಸಲಹೆಗೆ ಸೆ.10 ಕಡೆಯ ದಿನ ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ತಮ್ಮ ಸಲಹೆ, ಆಕ್ಷೇಪಣೆಗಳನ್ನು 2026ರ ಸೆಪ್ಟೆಂಬರ್ 10ರೊಳಗೆ ಸಲ್ಲಿಸಬಹುದಾಗಿದೆ.
ಇ-ಮೇಲ್: acsuddoffice@gmail.com
ಅಂಚೆ/ಖುದ್ದಾಗಿ: ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು.


















