ಬೆಂಗಳೂರು, ಆ.31 www.bengaluruwire.com: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೇರಿದಂತೆ ವಿವಿಧ ಸೇವೆಗಳು ಹಾಗೂ ಕಾಮಗಾರಿಗಳಲ್ಲಿನ ಲೋಪದೋಷಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ದಾಖಲಿಸಲು ಡ್ಯಾಷ್‌ಬೋರ್ಡ್ ಆಧಾರಿತ ಆನ್‌ಲೈನ್ ವ್ಯವಸ್ಥೆ ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಸಾರ್ವಜನಿಕರ ಅಹವಾಲುಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಅತ್ಯಾಧುನಿಕ ಮೊಬೈಲ್ ಆ್ಯಪ್ ಹಾಗೂ ವೆಬ್ ಪೋರ್ಟಲ್ ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
ಯಾವೆಲ್ಲಾ ಸಮಸ್ಯೆಗಳಿಗೆ ದೂರು ನೀಡಬಹುದು?:
ಆಸ್ತಿ ಮತ್ತು ಕಂದಾಯ: ಇ-ಸ್ವತ್ತು ವಿತರಣೆಯಲ್ಲಿನ ವಿಳಂಬ ಹಾಗೂ ಗ್ರಾ.ಪಂ. ವ್ಯಾಪ್ತಿಯ ತೆರಿಗೆ ನಿರ್ಧರಣೆ ಸಮಸ್ಯೆಗಳು.

ಮೂಲಸೌಕರ್ಯ: ಜೆಜೆಎಂ (ಜಲ ಜೀವನ್ ಮಿಷನ್), ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯ ಹಾಗೂ ಗ್ರಾಮೀಣ ರಸ್ತೆ ಕಾಮಗಾರಿಗಳ ಗುಣಮಟ್ಟ.
ಪರಿಸರ ಮತ್ತು ಆಸ್ತಿ ರಕ್ಷಣೆ: ಗ್ರಾ.ಪಂ. ವ್ಯಾಪ್ತಿಯ ಕೆರೆ ನಿರ್ವಹಣೆ, ಕೆರೆ ಒತ್ತುವರಿ ತೆರವು, ಸಾಮಾಜಿಕ ಅರಣ್ಯೀಕರಣ ಹಾಗೂ ಗ್ರಾಮೀಣ ಆಸ್ತಿಗಳ ಸೃಜನೆ.
ಭ್ರಷ್ಟಾಚಾರ ಮತ್ತು ವಿಳಂಬ: ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳು.
ಪಾರದರ್ಶಕತೆಗೆ ಫೋಟೋ, ವಿಡಿಯೋ ಸಹಿತ ದೂರು ಸಲ್ಲಿಕೆ:
ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ನೇರ ಸಂಪರ್ಕ ಹೊಂದಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಸಾರ್ವಜನಿಕರು ಫೋಟೋ ಮತ್ತು ವಿಡಿಯೋ ಸಹಿತ ದೂರು ದಾಖಲಿಸುವ ಸೌಲಭ್ಯವನ್ನು ಈ ಆ್ಯಪ್ ಒಳಗೊಂಡಿರಲಿದೆ.
ದೂರು ದಾಖಲಾದ ನಂತರ ಸಂಬಂಧಪಟ್ಟ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ ಲಭ್ಯವಾಗಲಿದ್ದು, ಸಾರ್ವಜನಿಕರು ತಮ್ಮ ದೂರಿನ ಸ್ಥಿತಿಗತಿಯನ್ನು (Status Track) ಲೈವ್ ಆಗಿ ವೀಕ್ಷಿಸಬಹುದು.
ಬೆಂಗಳೂರು ನಗರದಲ್ಲಿ ಜಿಬಿಎ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ ಮೊದಲಾದ ಸೇವೆಗಳಿಗೆ ಇರುವ ‘ನಮ್ಮ ಬೆಂಗಳೂರು’ (Namma Bengaluru) ಮತ್ತು ‘ಸಹಾಯ’ (Sahaaya) ಆ್ಯಪ್ ಮಾದರಿಯಲ್ಲೇ, ಗ್ರಾಮೀಣಾಭಿವೃದ್ಧಿ ಇಲಾಖೆಗೂ ಸಮಗ್ರ ಏಕಗವಾಕ್ಷಿ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.




















