ಬೆಂಗಳೂರು, ಸೆ.04 www.bengaluruwire.com: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಹಲವು ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ನಾಡಿನ ಜನತೆಯ ಪ್ರೀತಿ, ಗೌರವಕ್ಕೆ ಪಾತ್ರವಾಗಿದ್ದ ಹೆಮ್ಮೆಯ ಆನೆ ‘ಅಭಿಮನ್ಯು’ವಿಗೆ ಈ ಬಾರಿ ಮತ್ತೊಂದು ಮಹತ್ವದ ಗೌರವ ಒಲಿದುಬಂದಿದೆ.
2026ರ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯುವನ್ನು ‘ನಿಶಾನೆ ಆನೆ’ಯನ್ನಾಗಿ ನಿಯೋಜಿಸಿ ಮೆರವಣಿಗೆ ಮುನ್ನಡೆಸುವಂತೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಧಿಕೃತ ಟಿಪ್ಪಣಿ ಮೂಲಕ ಸೂಚಿಸಿದ್ದಾರೆ.
ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಜಗತ್ತಿಗೆ ಸಾರುವ ಮಹತ್ವದ ಉತ್ಸವ. ಈ ಜಂಬೂಸವಾರಿಯಲ್ಲಿ ದಸರಾ ಗಜಪಡೆಯ ಆನೆಗಳು ಸಾಂಪ್ರದಾಯಿಕವಾಗಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಈ ಪರಂಪರೆಯಲ್ಲಿ ಅಭಿಮನ್ಯುವಿನ ಶಿಸ್ತು, ಧೈರ್ಯ ಹಾಗೂ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ನಿಸ್ವಾರ್ಥ ಸೇವೆ ಅತ್ಯಂತ ಅವಿಸ್ಮರಣೀಯವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸಿ ಇತ್ತೀಚೆಗಷ್ಟೇ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಹಾಗೂ ಗೌರವ ಸಮಾರಂಭ ಸಾರ್ವಜನಿಕರು ಮತ್ತು ದಸರಾ ಪ್ರಿಯರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಮುಂದುವರಿದ ಭಾಗವಾಗಿ, ಗಜಪಡೆಯೊಂದಿಗೆ ಅಭಿಮನ್ಯು ಹೆಮ್ಮೆಯಿಂದ ಹಾಗೂ ಗೌರವಪೂರ್ವಕವಾಗಿ ಪಾಲ್ಗೊಳ್ಳುವಂತಾಗಲು ಈ ಬಾರಿಯ ಜಂಬೂಸವಾರಿಯಲ್ಲಿ ಆತನನ್ನು ‘ನಿಶಾನೆ ಆನೆ’ಯಾಗಿ ಮುಂಚೂಣಿಯಲ್ಲಿ ನಿಲ್ಲಿಸುವುದು ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಅಭಿಮನ್ಯುವಿನ ಉಪಸ್ಥಿತಿಯು ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರುಗು ತರಲಿದ್ದು, ಈ ಕುರಿತು ತಕ್ಷಣವೇ ಸೂಕ್ತ ಕ್ರಮ ಹಾಗೂ ವ್ಯವಸ್ಥೆ ಕೈಗೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ವನ್ಯಜೀವಿ ಸಂರಕ್ಷಣೆ) ಸಚಿವ ರಾಮಲಿಂಗಾರೆಡ್ಡಿ ಅವರು ನಿರ್ದೇಶನ ನೀಡಿದ್ದಾರೆ.


















