ಬೆಂಗಳೂರು, ಸೆ.04 www.bengaluruwire.com: ರಾಜಧಾನಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಬರೋಬ್ಬರಿ 4,500 ನೂತನ ಎಲೆಕ್ಟ್ರಿಕ್ (EV) ಬಸ್‌ಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಅಧಿಕೃತ ಅನುಮೋದನೆ ನೀಡಿದೆ.
ಮುಂದಿನ ಒಂದೆರಡು ವರ್ಷಗಳಲ್ಲಿ ಹಂತ-ಹಂತವಾಗಿ ಈ ಪರಿಸರಸ್ನೇಹಿ ಬಸ್‌ಗಳು ರಸ್ತೆಗಿಳಿಯಲಿದ್ದು, ನಗರದ ಬಸ್ ಜಾಲ ಮತ್ತಷ್ಟು ವಿಸ್ತಾರಗೊಳ್ಳಲಿದೆ.
ದೇಶದಲ್ಲೇ ಅತಿ ದೊಡ್ಡ ಬಸ್ ನೆಟ್‌ವರ್ಕ್ ಪ್ರಸ್ತುತ ಸುಮಾರು 7,000 ಬಸ್‌ಗಳನ್ನು ನಿರ್ವಹಿಸುತ್ತಿರುವ ಬಿಎಂಟಿಸಿ, ದೇಶದಲ್ಲೇ ಅತಿ ದೊಡ್ಡ ನಗರ ಬಸ್ ಸಮೂಹ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊಸ 4,500 ಇವಿ ಬಸ್‌ಗಳ ಸೇರ್ಪಡೆಯೊಂದಿಗೆ ಸಂಸ್ಥೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದ್ದು, ನಗರದ ಮೂಲೆ ಮೂಲೆಗಳಿಗೂ ಸುಲಭ, ವೇಗದ ಮತ್ತು ಗುಣಮಟ್ಟದ ಸಾರಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ.
ಈ ಯೋಜನೆಯ ಪ್ರಮುಖ ಉದ್ದೇಶಗಳು:

ಸಾರ್ವಜನಿಕ ಸಾರಿಗೆಯ ಬಲವರ್ಧನೆ: ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಮೂಹ ಸಾರಿಗೆ ಜಾಲವನ್ನು ಗಟ್ಟಿಗೊಳಿಸುವುದು.
ಟ್ರಾಫಿಕ್ ದಟ್ಟಣೆಗೆ ಮುಕ್ತಿ: ಖಾಸಗಿ ವಾಹನಗಳ ಬಳಕೆಯನ್ನು ತಗ್ಗಿಸಿ, ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.
ಉತ್ತಮ ಕನೆಕ್ಟಿವಿಟಿ: ನಗರದ ಹೊರವಲಯ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶಗಳಿಗೆ ನಿರಂತರ ಬಸ್ ಸಂಪರ್ಕ ನೀಡುವುದು.
ಸಾಮಾನ್ಯರಿಗೆ ಸುಲಭ ಪ್ರಯಾಣ: ನಿತ್ಯ ಕಚೇರಿ, ಕಾಲೇಜುಗಳಿಗೆ ತೆರಳುವ ಲಕ್ಷಾಂತರ ಸಾರ್ವಜನಿಕರಿಗೆ ಬಸ್ ಲಭ್ಯತೆಯನ್ನು ಸುಲಭ ಮತ್ತು ಆರಾಮದಾಯಕವಾಗಿಸುವುದು.
“ಹೆಚ್ಚು ಬಸ್‌ಗಳು, ಹೆಚ್ಚಿನ ಸಂಪರ್ಕ ಹಾಗೂ ಸ್ವಚ್ಛ ಸಾರಿಗೆ ನಮ್ಮ ಗುರಿ. ಇದು ಬಿಎಂಟಿಸಿಗೆ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವ ಲಕ್ಷಾಂತರ ಬೆಂಗಳೂರಿಗರಿಗೆ ಸಿಕ್ಕ ದೊಡ್ಡ ಬೋನಸ್” ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.



















