ಬೆಂಗಳೂರು, ಸೆ.07 www.bengaluruwire.com: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಬಿಎಸ್‌ಡಬ್ಲ್ಯೂಎಂಎಲ್ (BSWML) ವತಿಯಿಂದ ಕೋರಮಂಗಲದಲ್ಲಿ ಅತ್ಯಾಧುನಿಕ ‘ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ’ ಹಾಗೂ ನೂತನ ಸಂಸ್ಕರಣಾ ಘಟಕಗಳನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ನೂತನ ಘಟಕಗಳನ್ನು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಚಂದ್ರಪ್ಪ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಪ್ರಾಯೋಗಿಕ ತರಬೇತಿ:
ತ್ಯಾಜ್ಯವನ್ನು ಕೇವಲ ಕಸವಾಗಿ ನೋಡದೆ ಸಂಪನ್ಮೂಲವಾಗಿ ಬಳಸುವ ಉದ್ದೇಶದಿಂದ ‘ಕಸದಿಂದ ರಸ’ ತತ್ವದಡಿ ಈ ಕಲಿಕಾ ಕೇಂದ್ರ ಕಾರ್ಯನಿರ್ವಹಿಸಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಪಾರ್ಟ್‌ಮೆಂಟ್ ನಿವಾಸಿಗಳು, ವಾಣಿಜ್ಯ ಸಂಸ್ಥೆಗಳ ಉದ್ಯೋಗಿಗಳು ಹಾಗೂ ಪೌರಕಾರ್ಮಿಕರಿಗೆ ನುರಿತ ತಜ್ಞರಿಂದ ವೈಜ್ಞಾನಿಕ ಕಸ ವಿಂಗಡಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು. ಈ ಅಭಿಯಾನಕ್ಕೆ ಆರ್‌ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಪ್ರಮುಖ ಸಂಸ್ಥೆಗಳು ಸಾಥ್ ನೀಡಿವೆ ಎಂದು ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ತಿಳಿಸಿದರು.

ಬಯೋಗ್ಯಾಸ್ ಮತ್ತು ಜವಳಿ ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನ:
ಬಯೋಗ್ಯಾಸ್ ಉತ್ಪಾದನೆ: ಕೇಂದ್ರದಲ್ಲಿ 13 ಟನ್ ಹಸಿ ಕಸ ಸಂಸ್ಕರಣಾ ಸಾಮರ್ಥ್ಯದ ಬಯೋ-ಮಿಥನೈಸೇಷನ್ ಘಟಕ ಆರಂಭಿಸಲಾಗಿದ್ದು, ಉತ್ಪತ್ತಿಯಾಗುವ ಗ್ಯಾಸ್ ಅನ್ನು ಸ್ಥಳೀಯ ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದೆ. ಜೊತೆಗೆ 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್‌ಫರ್ ಸ್ಟೇಷನ್ (MTS) ಕಾರ್ಯಾರಂಭ ಮಾಡಿದೆ.
ಜವಳಿ ಮರುಬಳಕೆ: ಟೈಲರಿಂಗ್ ಮತ್ತು ಗಾರ್ಮೆಂಟ್ಸ್ ತ್ಯಾಜ್ಯ ಬಟ್ಟೆಗಳಿಂದ ಬ್ಯಾಗ್, ಮ್ಯಾಟ್ ಹಾಗೂ ಬೆಡ್‌ಶೀಟ್‌ಗಳನ್ನು ತಯಾರಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಥರ್ಮಾಕೋಲ್ ಮರುಬಳಕೆ: ಬಿಸಾಡುವ ಥರ್ಮಾಕೋಲ್ ತ್ಯಾಜ್ಯವನ್ನು ಕರಗಿಸಿ (Melt) ಗಟ್ಟಿ ಪದಾರ್ಥವನ್ನಾಗಿ ದೆಹಲಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿ ಆಕರ್ಷಕ ಫೋಟೋ ಫ್ರೇಮ್ ಹಾಗೂ ಕಿವಿಯೋಲೆಗಳಂತಹ ವಸ್ತುಗಳನ್ನಾಗಿ ಮರುಬಳಕೆ ಮಾಡಲಾಗುತ್ತಿದೆ.
ಮನೆ ಬಾಗಿಲಲ್ಲೇ ಬೃಹತ್ ತ್ಯಾಜ್ಯ ಸಂಗ್ರಹಣೆ (Bulk Waste):
ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಳೆಯ ಸೋಫಾ, ಮಂಚ, ಮೇಜು ಮುಂತಾದ ಭಾರೀ ಗಾತ್ರದ ತ್ಯಾಜ್ಯವನ್ನು ನಾಗರಿಕರು ತಮ್ಮ ಆರ್.ಡಬ್ಲ್ಯೂ.ಎ (RWA) ಗ್ರೂಪ್‌ಗಳಲ್ಲಿ ತಿಳಿಸಿದರೆ, ‘ಸಾಹಸ್’ ಎನ್‌ಜಿಒ ಸಂಸ್ಥೆಯು ಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿ ಮರುಬಳಕೆಗೆ ಕಳುಹಿಸಲಿದೆ. ಅಲ್ಲದೆ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ಅತ್ಯಾಧುನಿಕ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದ್ದು, ನಿರ್ವಹಣೆಯನ್ನು ‘ezee’ ಸಂಸ್ಥೆಗೆ ವಹಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಶಿಕಲಾ ಹಾಗೂ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



















