ಬೆಂಗಳೂರು, ಸೆ.08 www.bengaluruwire.com: ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ಹಾಗೂ ಉದ್ಯೋಗ, ಶಿಕ್ಷಣದ ನಿಮಿತ್ತ ಕರ್ನಾಟಕ-ಆಂಧ್ರಪ್ರದೇಶ ನಡುವೆ ನಿತ್ಯ ಸಂಚರಿಸುವ ಜನರಿಗೆ ಭಾರತೀಯ ರೈಲ್ವೆ ಸದ್ಯದಲ್ಲೇ ಸಿಹಿಸುದ್ದಿ ನೀಡಲಿದೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದ ರಾಜಧಾನಿ ಬೆಂಗಳೂರಿನ ಮಾರ್ಗವಾಗಿ ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ನೂತನ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಆರಂಭಿಸುವ ಪ್ರಸ್ತಾವನೆ ರೈಲ್ವೆ ಮಂಡಳಿಯ ಅಂಗಳ ತಲುಪಿದೆ.
ತಿರುಪತಿ ಸಂಸದ ಮದ್ದಿಲ ಗುರುಮೂರ್ತಿ ಅವರು ತಿರುಪತಿ ಭಾಗಕ್ಕೆ ರೈಲು ಸಂಪರ್ಕ ವಿಸ್ತರಿಸುವಂತೆ ಮಾಡಿದ ಮನವಿಗೆ ರೈಲ್ವೆ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ (SWR) ಸಿದ್ಧಪಡಿಸಿರುವ ವಿಶೇಷ ಕಾರ್ಯಯೋಜನೆಯಲ್ಲಿ ಈ ಮಾರ್ಗದ ಪ್ರಸ್ತಾವನೆಯನ್ನು ಸೇರಿಸಲಾಗಿದೆ. ಪ್ರಸ್ತಾವನೆ ಪರಿಗಣಿಸಿದ ರೈಲ್ವೆ ಮಂಡಳಿ ಅಧ್ಯಕ್ಷರು ಹಾಗೂ ಸಿಇಒ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಸಂಸದರು, ಬಾಕಿ ಇರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈಲು ಸಂಚಾರಕ್ಕೆ ಶೀಘ್ರ ಚಾಲನೆ ನೀಡುವಂತೆ ಕೋರಿದ್ದಾರೆ.
ಪ್ರಯಾಣಿಕರಿಗೆ ಸಿಗುವ ಪ್ರಮುಖ ಪ್ರಯೋಜನಗಳು:

ಕಡಿಮೆ ಅವಧಿಯ ಪ್ರಯಾಣ: ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ ಈ ವಂದೇ ಭಾರತ್ ರೈಲಿನಿಂದ ಶಿವಮೊಗ್ಗ, ಭದ್ರಾವತಿ, ತುಮಕೂರು ಹಾಗೂ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಪ್ರಯಾಣದ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ.
ಭಕ್ತರಿಗೆ ಅನುಕೂಲ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳುವ ರಾಜ್ಯದ ಸಾವಿರಾರು ಭಕ್ತರಿಗೆ ಒಂದೇ ದಿನದಲ್ಲಿ ಅಥವಾ ಆರಾಮದಾಯಕವಾಗಿ ಹೋಗಿ ಬರಲು ಸುಲಭ ಸಾರಿಗೆ ಲಭ್ಯವಾಗಲಿದೆ.
ವ್ಯಾಪಾರ ಮತ್ತು ಶಿಕ್ಷಣ: ರಾಜಧಾನಿ ಬೆಂಗಳೂರು ಮತ್ತು ತಿರುಪತಿ ನಡುವೆ ಉನ್ನತ ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಸಂಚರಿಸುವ ಜನರಿಗೆ ಈ ಸೆಮಿ ಹೈಸ್ಪೀಡ್ ರೈಲು ಅತ್ಯಂತ ವೇಗದ ಕನೆಕ್ಟಿವಿಟಿ ಒದಗಿಸಲಿದೆ.
ಈ ಯೋಜನೆಯ ಅಧಿಕೃತ ವೇಳಾಪಟ್ಟಿ, ನಿಲುಗಡೆ ಸ್ಥಳಗಳು ಹಾಗೂ ಟಿಕೆಟ್ ದರಗಳ ಕುರಿತು ರೈಲ್ವೆ ಇಲಾಖೆಯಿಂದ ಶೀಘ್ರದಲ್ಲೇ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆಯಿದೆ.



















