ಚಿಕ್ಕಮಗಳೂರು, ಆ.31 www.bengaluruwire.com: ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬೆಟ್ಟಗಳಲ್ಲಿ ಅಪರೂಪದ ನೀಲಕುರಿಂಜಿಯಂತಹ ನೀಲಿ–ನೇರಳೆ ಬಣ್ಣದ ಹೂವುಗಳು ಅರಳಿದ್ದು, ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರ ಗಮನ ಸೆಳೆಯುತ್ತಿವೆ.
2022-23ರ ಅವಧಿಯಲ್ಲಿ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಂಡುಬಂದಿದ್ದ ಈ ಹೂವುಗಳು, ಈ ಬಾರಿ ಸೀಮಿತ ಪ್ರಮಾಣದಲ್ಲಿ ಅರಳಿವೆ. ಹಸಿರು ಹುಲ್ಲುಗಾವಲು ಹಾಗೂ ಶೋಲಾ ಕಾಡುಗಳ ನಡುವೆ ಅಲ್ಲಲ್ಲಿ ಕಂಗೊಳಿಸುತ್ತಿರುವ ನೀಲಿ ಚಿತ್ತಾರವು ಕುದುರೆಮುಖದ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಕಳೆ ತಂದಿದೆ.
ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ:
ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಅತ್ಯಂತ ಸೂಕ್ಷ್ಮ ಜೀವವೈವಿಧ್ಯ ತಾಣವಾಗಿದೆ. ಈ ಅಪರೂಪದ ಹೂವುಗಳನ್ನು ನೋಡಲು ಬರುವ ಚಾರಣಿಗರು ಗಿಡಗಳಿಗೆ ಹಾನಿ ಮಾಡದಂತೆ, ಹೂವುಗಳನ್ನು ಕೀಳದಂತೆ ಹಾಗೂ ತ್ಯಾಜ್ಯ ಎಸೆಯದೆ ಸ್ವಚ್ಛತೆ ಕಾಪಾಡುವಂತೆ ಪ್ರವಾಸೋದ್ಯಮ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ನಿಯಮಗಳು ಹಾಗೂ ಅಧಿಕೃತ ಅನುಮತಿಗಳನ್ನು ಪಡೆದು ಮಾತ್ರ ಚಾರಣ ಕೈಗೊಳ್ಳಬೇಕಿದೆ.
”ಕುದುರೆಮುಖದ ಬೆಟ್ಟಗಳಲ್ಲಿ ಅರಳಿರುವ ನೀಲಕುರಿಂಜಿಯಂತಹ ಹೂವುಗಳು ನಮ್ಮ ಪ್ರಕೃತಿ ಸಂಪತ್ತಿನ ಅಪೂರ್ವ ಸೌಂದರ್ಯ. ಪ್ರವಾಸಿಗರು ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು.”
— ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಸಚಿವರು
”ಕುದುರೆಮುಖದಲ್ಲಿ ಸೀಮಿತ ಪ್ರಮಾಣದಲ್ಲಿ ಅರಳಿರುವ ಈ ಹೂವುಗಳ ಆವಾಸಸ್ಥಳಕ್ಕೆ ಯಾವುದೇ ಹಾನಿಯಾಗದಂತೆ ಪ್ರವಾಸಿಗರಿಗೆ ಮಾರ್ಗದರ್ಶನ ಮತ್ತು ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.”
— ಡಾ. ರಾಮ್ ಪ್ರಸಾತ್ ಮನೋಹರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ
ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ನೈಸರ್ಗಿಕ ವಿದ್ಯಮಾನಗಳ ಮಹತ್ವದ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. Video news: https://www.instagram.com/reel/DcsT2WNsZYr/?igsi=M2Y2Z2Q4aTFycWU=



















