ಬೆಂಗಳೂರು, ಸೆ.03 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನ ನೀಲಾಕಾಶದಲ್ಲಿ ಮತ್ತೆ ರಣರೋಚಕ ಯುದ್ಧವಿಮಾನಗಳ ಗರ್ಜನೆ ಕೇಳಿಬರಲು ವೇದಿಕೆ ಸಜ್ಜಾಗಿದೆ.
ಏಷ್ಯಾದ ಅತಿ ದೊಡ್ಡ ಹಾಗೂ ಜಗತ್ತಿನ ಪ್ರತಿಷ್ಠಿತ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನವಾದ ‘ಏರೋ ಇಂಡಿಯಾ’ದ 16ನೇ ಆವೃತ್ತಿ (Aero India 2027) 2027ರ ಫೆಬ್ರವರಿ 8 ರಿಂದ 12 ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು (Department of Defence Production) ಈ ಬೃಹತ್ ಮೇಳವನ್ನು ಆಯೋಜಿಸುತ್ತಿದ್ದು, ಜಾಗತಿಕ ಮಟ್ಟದ ಏರೋಸ್ಪೇಸ್ ದೈತ್ಯರು, ನೀತಿ ನಿರೂಪಕರು, ನವೋದ್ಯಮಿಗಳು ಮತ್ತು ರಕ್ಷಣಾ ಕ್ಷೇತ್ರದ ತಜ್ಞರು ಒಂದೇ ಸೂರಿನಡಿ ಸೇರಲಿದ್ದಾರೆ.
ಇಂದಿನಿಂದಲೇ (ಸೆಪ್ಟೆಂಬರ್ 3) ಅಧಿಕೃತ ನೋಂದಣಿ ಶುರು:

ಏರೋ ಇಂಡಿಯಾ 2027ರ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಂಪನಿಗಳು ಹಾಗೂ ಸಂಸ್ಥೆಗಳಿಗೆ ಆನ್‌ಲೈನ್ ನೋಂದಣಿ ಮತ್ತು ಸ್ಟಾಲ್/ಸ್ಪೇಸ್ ಬುಕಿಂಗ್ ಪ್ರಕ್ರಿಯೆ ಇಂದಿನಿಂದ (2026ರ ಸೆಪ್ಟೆಂಬರ್ 3) ಅಧಿಕೃತವಾಗಿ ಆರಂಭವಾಗಿದೆ.
ಪ್ರದರ್ಶಕರು ಮತ್ತು ವೀಕ್ಷಕರಿಗೆ ಸುಗಮ ಸೇವೆ ಒದಗಿಸಲು ಸುಧಾರಿತ ಅಧಿಕೃತ ವೆಬ್‌ಪೋರ್ಟಲ್ ಸಿದ್ಧಪಡಿಸಲಾಗಿದ್ದು, ಆಸಕ್ತರು www.aeroindia.gov.in ಪೋರ್ಟಲ್ ಮೂಲಕ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಾನ-ಗರ್ಜನೆಯ ವಾಯು ಸಾಹಸ: ಕಣ್ಮನ ಸೆಳೆಯಲಿವೆ ಲೋಹದ ಹಕ್ಕಿಗಳು
ಐದು ದಿನಗಳ ಕಾಲ ನಡೆಯುವ ಈ ವೈಮಾನಿಕ ಮಹೋತ್ಸವದಲ್ಲಿ:
ರೋಮಾಂಚಕ ಏರ್ ಶೋ: ಭಾರತೀಯ ವಾಯುಪಡೆ (IAF) ಹಾಗೂ ಜಗತ್ತಿನ ಮುಂಚೂಣಿ ಏರೋಬ್ಯಾಟಿಕ್ ತಂಡಗಳಿಂದ ಆಕಾಶದಲ್ಲಿ ಕಣ್ಣು ಕೋರೈಸುವ ಸಾಹಸ ಪ್ರದರ್ಶನಗಳು.
ತಂತ್ರಜ್ಞಾನ ಪ್ರದರ್ಶನ: ಭವಿಷ್ಯದ ಸಮರ ವಿಮಾನಗಳು, ಡ್ರೋನ್‌ಗಳು ಹಾಗೂ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳ ಲೈವ್ ಡೆಮೊ.
ವ್ಯಾಪಾರ ಒಪ್ಪಂದಗಳು: ಜಾಗತಿಕ ಕಂಪನಿಗಳ ನಡುವೆ B2B (ಬಿಸಿನೆಸ್-ಟು-ಬಿಸಿನೆಸ್) ಮತ್ತು G2B (ಸರ್ಕಾರ-ಉದ್ಯಮ) ಮಹತ್ವದ ಒಪ್ಪಂದಗಳು ಹಾಗೂ ಜಂಟಿ ಸಹಯೋಗಗಳು.
‘ಆತ್ಮನಿರ್ಭರ ಭಾರತ’ಕ್ಕೆ ಹೊಸ ರೆಕ್ಕೆ:
ದೇಶದ ರಕ್ಷಣಾ ಉತ್ಪಾದನೆ ಮತ್ತು ಏರೋಸ್ಪೇಸ್ ವಲಯದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲು ಏರೋ ಇಂಡಿಯಾ ಪ್ರಮುಖ ವೇದಿಕೆಯಾಗಿದೆ. ಭಾರತವನ್ನು ಜಾಗತಿಕ ರಕ್ಷಣಾ ಪೂರೈಕೆ ಸರಪಳಿಯ (Global Supply Chain) ವಿಶ್ವಾಸಾರ್ಹ ಪಾಲುದಾರನನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಏರೋ ಇಂಡಿಯಾ 2027’ ಮಹತ್ವದ ಮೈಲಿಗಲ್ಲಾಗಲಿದೆ. ಈ ಬಾರಿಯ ಸಮಾವೇಶದಲ್ಲಿ ಭಾರತೀಯ ಸ್ಟಾರ್ಟಪ್‌ಗಳು ಹಾಗೂ MSME ಗಳಿಗೆ ಜಾಗತಿಕ ಬಂಡವಾಳ ಹೂಡಿಕೆ, ತಂತ್ರಜ್ಞಾನ ವಿನಿಮಯ ಮತ್ತು ರಫ್ತು ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.


















