ಬೆಂಗಳೂರು, ಸೆ.07 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಸೋರಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಹಾಗೂ ವಿಪಕ್ಷ ಬಿಜೆಪಿ ನಡುವೆ ವಾಕ್ಸಮರ ತಾರಕಕ್ಕೇರಿದೆ.
ನಗರಕ್ಕೆ ಪೂರೈಕೆಯಾಗುವ ಶೇ. 30ರಷ್ಟು ಕಾವೇರಿ ನೀರು ಲೆಕ್ಕಕ್ಕೆ ಸಿಗದೆ ಮಣ್ಣು ಪಾಲಾಗುತ್ತಿದ್ದರೂ, ಅದನ್ನು ತಡೆಯಲಾಗದ ಸರ್ಕಾರ ಕೇವಲ ಕಮಿಷನ್ ಹೊಡೆಯಲು ‘ಕಾವೇರಿ 6ನೇ ಹಂತ’ದ (Cauvery 6th Phase) ಹೆಸರಿನಲ್ಲಿ ₹7,000 ಕೋಟಿ ಹೊಸ ಲೂಟಿಗೆ ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಭೈರೇಗೌಡ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
30% ನೀರು ಪೋಲು: ಜಲಮಂಡಳಿ ವಿರುದ್ಧ ಆಕ್ರೋಶ:

“ಬೆಂಗಳೂರಿಗೆ ನಿತ್ಯ ಪೂರೈಕೆಯಾಗುವ ಕಾವೇರಿ ನೀರಿನಲ್ಲಿ ಬರೋಬ್ಬರಿ ಶೇ. 30ರಷ್ಟು ನೀರು ‘ಲೆಕ್ಕಕ್ಕೆ ಸಿಗದ ನೀರು’ (Non-Revenue Water – NRW) ಆಗಿ ಸೋರಿಕೆಯಾಗುತ್ತಿದೆ. ಹಳೆಯ ಪೈಪ್‌ಲೈನ್‌ಗಳ ಸೋರಿಕೆ ಮತ್ತು ಅನಧಿಕೃತ ಸಂಪರ್ಕಗಳನ್ನು ತಡೆಯುವಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಂಪೂರ್ಣ ವಿಫಲವಾಗಿದೆ. ದಿನನಿತ್ಯ ಕೋಟ್ಯಂತರ ಲೀಟರ್ ಶುದ್ಧ ಕುಡಿಯುವ ನೀರು ರಸ್ತೆ ಹಾಗೂ ಮಣ್ಣು ಪಾಲಾಗುತ್ತಿದ್ದರೂ ಆಡಳಿತಾರೂಢ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ” ಎಂದು ಅಶೋಕ್ ಕಿಡಿಕಾರಿದ್ದಾರೆ.
₹7,000 ಕೋಟಿ ಹೊಸ ಹಗರಣಕ್ಕೆ ಮುನ್ನುಡಿ?:
ಹಾಲಿ ಇರುವ ಮೂಲಸೌಕರ್ಯ, ಪೈಪ್‌ಲೈನ್ ಜಾಲ ಹಾಗೂ ಸೋರಿಕೆಯನ್ನು ಸರಿಪಡಿಸಲು ಯೋಗ್ಯತೆಯಿಲ್ಲದ ಸರ್ಕಾರ, ₹7,000 ಕೋಟಿ ವೆಚ್ಚದ ಹೊಸ ‘ಕಾವೇರಿ 6ನೇ ಹಂತ’ದ ಯೋಜನೆ ಘೋಷಿಸಲು ಹೊರಟಿದೆ. ಬೆಂಗಳೂರಿಗರು ಹನಿ ನೀರಿಗೂ ಪರದಾಡುತ್ತಿರುವ ಈ ಹೊತ್ತಿನಲ್ಲಿ, ಜನರಿಗೆ ನೀರು ಕೊಡುವುದಕ್ಕಿಂತ ಕಮಿಷನ್ ಪಡೆಯುವುದೇ ಸಚಿವರ ಏಕೈಕ ಅಜೆಂಡಾವಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಇದೇ ವೇಳೆ ಸಚಿವ ಕೃಷ್ಣ ಭೈರೇಗೌಡರ ವಿರುದ್ಧವೂ ಚಾಟಿ ಬೀಸಿದ ಅಶೋಕ್, “ಕೆಲಸಕ್ಕೆ ಬಾರದ ರೀಲ್ಸ್ ಮಾಡುವುದು, ದೊಡ್ಡ ಮಾತುಗಳ ಇಂಟರ್ವ್ಯೂ ಕೊಟ್ಟು ಪೋಸ್ ಕೊಡುವ ನಾಟಕ ಬಿಟ್ಟು, ಮೊದಲು ಪೋಲಾಗುತ್ತಿರುವ ನೀರನ್ನು ಉಳಿಸುವ ಕಡೆ ಗಮನಕೊಡಿ” ಎಂದು ಸಲಹೆ ನೀಡಿದ್ದಾರೆ. ಕುಡಿಯುವ ನೀರನ್ನೂ ಕಮಿಷನ್ ದಂಧೆಗೆ ಬಳಸಿಕೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಜನ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.



















