ಇಂದಿನ ವೇಗದ ಬದುಕಿನಲ್ಲಿ ಚಿಕ್ಕ-ಪುಟ್ಟ ವಿಷಯಗಳಿಗೂ ಮನಸ್ತಾಪ ಮಾಡಿಕೊಂಡು ವಿಚ್ಛೇದನ ನೀಡಿ ದೂರವಾಗುವ ದಂಪತಿಗಳ ಮಧ್ಯೆ, ವೃದ್ಧ ದಂಪತಿಗಳ ನಡುವಿನ ಪ್ರೀತಿಯ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಕೋಯಮತ್ತೂರು ಮೂಲದ ಮಹಿಳೆಯೊಬ್ಬರು ತಮ್ಮ ರೈಲು ಪ್ರಯಾಣದ ವೇಳೆ ಸೆರೆಹಿಡಿದ ವಿಡಿಯೊ, ಜೀವನಪರ್ಯಂತ ಪ್ರೀತಿ ಹೇಗಿರಬೇಕು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಈ ದೃಶ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೈಲಿನ ಕೆಳ ಬರ್ತ್‌ನಲ್ಲಿ ಕುಳಿತಿದ್ದ ವೃದ್ಧ ದಂಪತಿಗಳ ವಿಡಿಯೋವನ್ನು ಜಿಷ್ಮಾ ಉಣ್ಣಿಕೃಷ್ಣನ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ವೃದ್ಧ ಪತಿಯೊಬ್ಬರು ತಮ್ಮ ಪತ್ನಿಗೆ ಕಾಲ್ಗೆಜ್ಜೆ ಹಾಕಲು ಸಹಾಯ ಮಾಡುತ್ತಿರುವುದು ಕಂಡುಬರುತ್ತದೆ. ಪತಿಯು ಪ್ರೀತಿಯಿಂದ ಕಾಲ್ಗೆಜ್ಜೆ ಹಾಕುತ್ತಿದ್ದರೆ, ಇತ್ತ ಪತ್ನಿ ಸಂತೋಷದಿಂದ ತಮ್ಮ ಕಾಲುಗಳನ್ನು ಚಾಚಿ ಅದಕ್ಕೆ ಸ್ಪಂದಿಸುತ್ತಿದ್ದರು.
ಈ ವಿಡಿಯೋ ಹಂಚಿಕೊಂಡ ಉಣ್ಣಿಕೃಷ್ಣನ್, “ನಾನು ಸಾಮಾನ್ಯ ರೈಲು ಪ್ರಯಾಣ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ಒಂದು ಕ್ಷಣದಲ್ಲಿ ಜೀವಮಾನದ ಪ್ರೀತಿಗೆ ಸಾಕ್ಷಿಯಾದೆ” ಎಂದು ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೊ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, 36.5 ಸಾವಿರಕ್ಕೂ ಅಧಿಕ ಜನರು ಇದನ್ನು ಶೇರ್ ಮಾಡಿದ್ದಾರೆ. 1.70 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೊಗೆ ಲೈಕ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಅದ್ಭುತ ವಿಡಿಯೊ ನೋಡಿರುವ ಅನೇಕ ನೆಟ್ಟಿಗರು “ಇಂದಿನ ಯುವಕರು ಈ ದಂಪತಿಯಿಂದ ಪ್ರೀತಿ ಮತ್ತು ಬಾಂಧವ್ಯದ ಪಾಠ ಕಲಿಯಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಸಕಾರಾತ್ಮಕ ಭಾವನೆಗಳನ್ನು ಹರಡುವುದರ ಜೊತೆಗೆ, ನಿಜವಾದ ಪ್ರೀತಿಯ ಶಕ್ತಿಯನ್ನು ನೆನಪಿಸಿದೆ.




















