ಬೆಂಗಳೂರು, ಸೆ.09 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳಿಗೆ 6 ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ನೇಮಕಾತಿ ಮಾಡಿದ್ದಾರೆ
ಇನ್ನೊಂದೆಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು, ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ಆರೋಗ್ಯಾಧಿಕಾರಿ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಐದು ಹುದ್ದೆಗಳನ್ನು ಸೃಷ್ಟಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದೆ.
ಐದು ಪಾಲಿಕೆಗಳಿಗೆ ಉಸ್ತುವಾರಿ ಸಚಿವರ ನೇಮಕ
ಐದು ನಗಪಾಲಿಕೆಗಳ ಉಸ್ತುವಾರಿ ಸಚಿವರ ವಿವರಗಳು ಈ ಕೆಳಗಿವೆ:

* ಬೆಂಗಳೂರು ಪೂರ್ವ: ಕೃಷ್ಣಭೈರೇಗೌಡ, ಸಚಿವರು.
* ಬೆಂಗಳೂರು ಪಶ್ಚಿಮ: ಬಿ.ಎಸ್.ಸುರೇಶ್, ಸಚಿವರು.
* ಬೆಂಗಳೂರು ಉತ್ತರ: ಕೃಷ್ಣ ಬೈರೇಗೌಡ, ಸಚಿವರು.
* ಬೆಂಗಳೂರು ದಕ್ಷಿಣ: ರಾಮಲಿಂಗಾ ರೆಡ್ಡಿ, ಸಚಿವರು.
* ಬೆಂಗಳೂರು ಕೇಂದ್ರ: ದಿನೇಶ್ ಗುಂಡೂರಾವ್ ಹಾಗೂ ಬಿ.ಝಡ್. ಜಮೀರ್ ಅಹಮದ್ ಖಾನ್, ಸಚಿವರು.
ಹೆಚ್ಚುವರಿ ಆರೋಗ್ಯಾಧಿಕಾರಿ ಹುದ್ದೆಗೆ ಬೇಡಿಕೆ :
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ 10 ವಲಯಗಳಿಗೆ ಈಗಾಗಲೇ 10 ಜಂಟಿ ಆಯುಕ್ತರು, 10 ಉಪ ಆಯುಕ್ತರು, 10 ಮುಖ್ಯ ಅಭಿಯಂತರರು, ಮತ್ತು 10 ಅಧೀಕ್ಷಕ ಅಭಿಯಂತರರ ಹುದ್ದೆಗಳನ್ನು ಸೃಜಿಸಲಾಗಿದೆ. ಆದರೆ, ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ರ ಅಡಿಯಲ್ಲಿ ಕೇವಲ ಐದು ಆರೋಗ್ಯಾಧಿಕಾರಿಗಳ ಹುದ್ದೆಗಳಿಗೆ ಮಾತ್ರ ಅವಕಾಶವಿದೆ.
ಪಾಲಿಕೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಉಪ ಆರೋಗ್ಯಾಧಿಕಾರಿಗಳು ಸೇವಾ ಹಿರಿತನದ ಆಧಾರದ ಮೇಲೆ ಆರೋಗ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಆರೋಗ್ಯಾಧಿಕಾರಿ ಹುದ್ದೆಗಳ ಸಂಖ್ಯೆ ಕಡಿಮೆ ಇರುವುದರಿಂದ, ಅನೇಕ ಅರ್ಹ ಉಪ ಆರೋಗ್ಯಾಧಿಕಾರಿಗಳು ಬಡ್ತಿ ಮತ್ತು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವರು ನಿವೃತ್ತಿಯ ಅಂಚಿನಲ್ಲಿರುವುದರಿಂದ, ಅವರಿಗೆ ತಕ್ಷಣ ಬಡ್ತಿ ನೀಡುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ, ಈಗಾಗಲೇ ಇರುವ ಐದು ಆರೋಗ್ಯಾಧಿಕಾರಿ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಐದು ಹುದ್ದೆಗಳನ್ನು ಸೃಷ್ಟಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮನವಿ ಮಾಡಿದ್ದಾರೆ.
ಈ ಹೆಚ್ಚುವರಿ ಹುದ್ದೆಗಳು ಹತ್ತು ವಲಯಗಳಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ ಮತ್ತು ಸೇವಾ ಹಿರಿತನ ಹೊಂದಿರುವ ಉಪ ಆರೋಗ್ಯಾಧಿಕಾರಿಗಳಿಗೆ ಆರೋಗ್ಯಾಧಿಕಾರಿಗಳಾಗಿ ಬಡ್ತಿ ನೀಡಲು ನೆರವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.




















