ಬೆಂಗಳೂರು, ನ.13 www.bengaluruwire.com: ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ‘ನಮ್ಮ ಮೆಟ್ರೋ’ ಪಿಂಕ್ ಮಾರ್ಗದ (Pink Line) 7.5 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ತಾವರೆಕೆರೆ (ಎಸ್.ಜಿ. ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.
ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ, ರಾಜ್ಯಪಾಲರಾದ ಡಾ. ಸುಧಾ ಯಾದವ್, ಸಿಎಂ ಡಿ.ಕೆ. ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ನಿಲ್ದಾಣದಲ್ಲಿದ್ದ ಪಿಂಕ್ ಲೈನ್ ಮಾದರಿ ನಕ್ಷೆಯ ಮೂಲಕ ಮಾರ್ಗ, ಸಂಪರ್ಕ ವ್ಯವಸ್ಥೆ ಹಾಗೂ ಡಬಲ್ ಡೆಕ್ಕರ್ ಮಾದರಿಯ ಅನುಷ್ಠಾನದಿಂದ ಸಂಚಾರ ದಟ್ಟಣೆ ನಿವಾರಣೆಯಾಗುವ ಬಗೆಯನ್ನು ಸಿಎಂ ಮತ್ತು ಸಚಿವರು ಪ್ರಧಾನಿಯವರಿಗೆ ವಿವರಿಸಿದರು.

ಪಿಂಕ್ ಮಾರ್ಗದ ಪ್ರಮುಖ ವಿಶೇಷತೆಗಳು:
ಮಾರ್ಗ ಮತ್ತು ನಿಲ್ದಾಣಗಳು: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಈ 7.5 ಕಿ.ಮೀ. ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಬಿಳೇಕಹಳ್ಳಿ-ಐಐಎಂಬಿ, ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ಎಸ್.ಜಿ. ಪಾಳ್ಯ (ತಾವರೆಕೆರೆ) ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.

ಸಾರ್ವಜನಿಕ ಸೇವೆ: ನವೆಂಬರ್ 14ರ (ಶನಿವಾರ) ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕರ ಪ್ರಯಾಣಕ್ಕೆ ಈ ಮಾರ್ಗ ಮುಕ್ತವಾಗಲಿದೆ. ಈ ಉದ್ಘಾಟನೆಯೊಂದಿಗೆ ಬೆಂಗಳೂರು ಮೆಟ್ರೋ ಕಾರ್ಯಾಚರಣೆ ಜಾಲವು 103.6 ಕಿ.ಮೀ. ತಲುಪಿದ್ದು, ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಹೊರಹೊಮ್ಮಿದೆ.
ಸಿಎಂ ಡಿ.ಕೆ. ಶಿವಕುಮಾರ್ ಭಾಷಣದ ಮುಖ್ಯಾಂಶಗಳು:
ಐಐಎಂಬಿ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ರಾಜ್ಯದ ಅಭಿವೃದ್ಧಿ ಮತ್ತು ಮೆಟ್ರೋ ವಿಸ್ತರಣೆ ಕುರಿತು ಪ್ರಧಾನಮಂತ್ರಿಗಳ ಮುಂದೆ ಪ್ರಮುಖ ಬೇಡಿಕೆಗಳನ್ನು ಇರಿಸಿದರು:
1. ಮೆಟ್ರೋ ಆರ್ಥಿಕ ಹೊರೆ ಸಮಾನವಾಗಿ ಹಂಚಿಕೊಳ್ಳಿ: “ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯದ ನಡುವೆ 50:50 ಅನುಪಾತ ಎನ್ನಲಾಗುತ್ತಿದ್ದರೂ, ಭೂಸ್ವಾಧೀನ, ವಿದೇಶಿ ಸಾಲ ಮರುಪಾವತಿ ಹಾಗೂ ತೆರಿಗೆಗಳ ಹೊರೆ ರಾಜ್ಯದ ಮೇಲೆಯೇ ಬಿದ್ದಿದೆ. ದೆಹಲಿ ಮಾದರಿಯಲ್ಲೇ ಬೆಂಗಳೂರಿಗೂ ಆದ್ಯತೆ ನೀಡಿ, ಆರ್ಥಿಕ ಹೊರೆ ಹಾಗೂ ಕಾರ್ಯಾಚರಣೆ ನಷ್ಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು” ಎಂದು ಸಿಎಂ ಒತ್ತಾಯಿಸಿದರು.
2. 500 ಕಿ.ಮೀ. ಮೆಟ್ರೋ ಗುರಿ ಮತ್ತು ಕೆಂಪು ಮಾರ್ಗಕ್ಕೆ ಅನುಮತಿ: “ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಶೇ. 50 ರಷ್ಟು ತಗ್ಗಿಸಲು ಮೆಟ್ರೋ ಜಾಲವನ್ನು 500 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಮೆಟ್ರೋ ಯೋಜನೆಗಳು, ವಿಶೇಷವಾಗಿ ‘ಕೆಂಪು ಮಾರ್ಗ’ (Red Line) ಹಾಗೂ ಪರಿಷ್ಕೃತ ಡಿಪಿಆರ್‌ಗೆ ತ್ವರಿತ ಅನುಮೋದನೆ ನೀಡಬೇಕು. ವಿಳಂಬದಿಂದ ಹೆಚ್ಚಾಗಿರುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೊಳ್ಳಬೇಕು” ಎಂದು ಮನವಿ ಮಾಡಿದರು.

3. ರಾಜಕೀಯದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಭಾಗಿತ್ವ: “ಚುನಾವಣೆಗಳು ವಿಭಿನ್ನ ಜನಾದೇಶ ನೀಡಬಹುದು, ಆದರೆ ಜನರ ಆಶೋತ್ತರಗಳು ಬದಲಾಗುವುದಿಲ್ಲ. ನಾವು ರಾಜಕೀಯದಲ್ಲಿ ಸ್ಪರ್ಧೆ ಮಾಡೋಣ, ಆದರೆ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಸಾಧಿಸೋಣ. ವಿಕಸಿತ ಭಾರತದ ನಿರ್ಮಾಣದಲ್ಲಿ ಕರ್ನಾಟಕ ಪ್ರಮುಖ ಆಧಾರಸ್ತಂಭವಾಗಿದೆ” ಎಂದು ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.
4. ಬರ ಪರಿಹಾರ ಮತ್ತು ಕಬ್ಬು ಬೆಳೆಗಾರರಿಗೆ ನೆರವು: “ಕಳೆದ 70 ವರ್ಷಗಳಲ್ಲೇ ರಾಜ್ಯ ಕಂಡ ಅತ್ಯಂತ ಭೀಕರ ಬರಗಾಲ ಇದಾಗಿದ್ದು, 226 ತಾಲ್ಲೂಕುಗಳು ಬರಪೀಡಿತವಾಗಿವೆ. 62 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದ್ದು, ಎನ್‌ಡಿಆರ್‌ಎಫ್‌ನಿಂದ 22 ಸಾವಿರ ಕೋಟಿ ರೂ. ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು. ಈ ಬಗ್ಗೆ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆತರಲು ಸಿದ್ಧವಿದ್ದೇವೆ. ಜೊತೆಗೆ ಕಬ್ಬು ಬೆಳೆಗಾರರ ನೆರವಿಗೆ ಧಾವಿಸಬೇಕು ಮತ್ತು ಎಥೆನಾಲ್ ಅನುದಾನದಲ್ಲಿ ಕರ್ನಾಟಕಕ್ಕೆ ನ್ಯಾಯಯುತ ಪಾಲು ನೀಡಬೇಕು” ಎಂದು ಕೋರಿದರು.
5. ಅನೇಕ ಮೊದಲುಗಳ ರಾಜ್ಯ ಕರ್ನಾಟಕ: 1902ರಲ್ಲಿ ಮೊದಲ ವಿದ್ಯುತ್ ಉತ್ಪಾದನೆ, ಎಚ್‌ಎಎಲ್ ಸ್ಥಾಪನೆ, ಮೊದಲ ಕಂಪ್ಯೂಟರ್ ಮತ್ತು ಐಫೋನ್ ತಯಾರಿಕಾ ಘಟಕ, ನವೋದ್ಯಮ ನೀತಿ, ಎಐ ಕ್ಲಸ್ಟರ್, ವಿದೇಶಿ ಬಂಡವಾಳ ಹೂಡಿಕೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಹಾಗೂ ಭಗವದ್ಗೀತೆಯ ಸಂದೇಶದಂತೆ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಸಿಎಂ ತಮ್ಮ ಭಾಷಣದಲ್ಲಿ ಸ್ಮರಿಸಿದರು.


















