ಬೆಂಗಳೂರು, ಸೆ.10 www.bengaluruwire.com: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ಮಹತ್ವದ ಬಹಿರಂಗ ಪತ್ರ ಬರೆದಿದ್ದಾರೆ.
“ಜನರ ನಂಬಿಕೆ ಮತ್ತು ವಿಶ್ವಾಸದ ಮುಂದೆ ಅಧಿಕಾರ ಚಿಕ್ಕದು, ಜನರ ನಿರೀಕ್ಷೆಗಳ ಮುಂದೆ ಹುದ್ದೆ ಚಿಕ್ಕದು; ಜವಾಬ್ದಾರಿ ಹಾಗೂ ಹೊಣೆಗಾರಿಕೆ ಮಾತ್ರ ದೊಡ್ಡದು” ಎಂದು ಅವರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಡಿಗೆ ಸಾಮಾಜಿಕ ನ್ಯಾಯದ ಭದ್ರ ಬುನಾದಿ ಹಾಕಿ ಕೊಟ್ಟಿದ್ದು, ಶೋಷಿತರು ಹಾಗೂ ದಮನಿತರ ಪರವಾಗಿ ಆಡಳಿತ ನಡೆಸಿದ ಅವರ ಬದ್ಧತೆ ಮತ್ತು ಕಾಳಜಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಈಗಾಗಲೇ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ, ನೆಮ್ಮದಿ ಹಾಗೂ ಭದ್ರತೆ ಒದಗಿಸಿವೆ ಎಂದು ಅವರು ಸ್ಮರಿಸಿದ್ದಾರೆ.
100 ದಿನಗಳಲ್ಲಿ ಕೈಗೊಂಡ ಪ್ರಮುಖ ಕ್ರಮಗಳು:

ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ: ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5 ರಷ್ಟು ಮೀಸಲಾತಿ ಜಾರಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ.
ಬೃಹತ್ ಬಂಡವಾಳ ಹೂಡಿಕೆ: ₹29,679 ಕೋಟಿ ಮೊತ್ತದ ಹೊಸ ಹೂಡಿಕೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಸುಮಾರು 66,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ತಂತ್ರಜ್ಞಾನ ಮತ್ತು ನಾವೀನ್ಯತೆ: ದೇಶದಲ್ಲೇ ಮೊದಲ ಸರ್ಕಾರಿ ಪ್ರಾಯೋಜಿತ ಎಐ (AI) ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ ಶಿಕ್ಷಣ ಆರಂಭ.
ಉದ್ಯೋಗ ಸೃಷ್ಟಿ ಹಾಗೂ ನೇಮಕಾತಿ: ಹಿಂದುಳಿದ 10 ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯ ಯೋಜನೆ ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ.
ಯುವ ಸಬಲೀಕರಣ ಹಾಗೂ ಕೃಷಿ ರಕ್ಷಣೆ: ಕ್ರೀಡೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು 10,000 ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ ಮತ್ತು ಬರ ಪರಿಸ್ಥಿತಿ ನಿಭಾಯಿಸಲು ಮೋಡ ಬಿತ್ತನೆ ಯೋಜನೆ.
ತ್ವರಿತ ಸಾರ್ವಜನಿಕ ಸ್ಪಂದನೆ: ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಮುಖ್ಯಮಂತ್ರಿಗಳ ನೇರ ಉಸ್ತುವಾರಿಯಲ್ಲಿ ‘ಪ್ರಜಾ ಸೇವೆ’ ಇಲಾಖೆ ಸ್ಥಾಪನೆ.
ಈ ಕ್ರಮಗಳು ಕೇವಲ ಸಾಧನೆಗಳ ಪಟ್ಟಿಯಲ್ಲ, ಬದಲಿಗೆ ಭವಿಷ್ಯದ ಆಡಳಿತಕ್ಕೆ ಮಾರ್ಗದರ್ಶಿ ಎಂದು ತಿಳಿಸಿದ ಸಿಎಂ, ರಾಜ್ಯದ ರೈತರು ಎದುರಿಸುತ್ತಿರುವ ಬರ ಪರಿಸ್ಥಿತಿಯಂತಹ ಸವಾಲುಗಳನ್ನು ದಿಟ್ಟತನದಿಂದ ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ. “100 ದಿನ – 100 ಹೆಜ್ಜೆ – ಒಂದೇ ಸಂಕಲ್ಪ: ದೃಢ ಕರ್ನಾಟಕದ ಸಂಕಲ್ಪ” ಎಂಬ ಧ್ಯೇಯದೊಂದಿಗೆ ರಾಜ್ಯವನ್ನು ಸರ್ವಾಂಗೀಣವಾಗಿ ಮುನ್ನಡೆಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



















