ವಿಶೇಷ ವರದಿ: ಶ್ಯಾಮ್ ಹೆಬ್ಬಾರ್.ಎಸ್
ಬೆಂಗಳೂರು, ಸೆ.10 www.bengaluruwire.com: ಒಂದೆಡೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಸೆ.10) 100 ದಿನ ಪೂರ್ಣಗೊಳಿಸಿ ಸಂಭ್ರಮಿಸುತ್ತಿದೆ. ಇನ್ನೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೇಯರ್, ಕಾರ್ಪೊರೇಟರ್ ಗಳಿಲ್ಲದೆ ಇಂದಿಗೆ ಸರಿಯಾಗಿ ಆರು ವರ್ಷ ಪೂರ್ಣಗೊಂಡಿದೆ.
2015ರಲ್ಲಿ ಬಿಬಿಎಂಪಿ ಚುನಾವಣೆ ನಡೆದು, 2020 ಸೆಪ್ಟೆಂಬರ್ 10ರಂದು ಆ ಅವಧಿ ಆಂತ್ಯವಾಗಿತ್ತು. ಆ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯವಸ್ಥೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳೆಂದು ಐದು ನಗರ ಪಾಲಿಕೆಗಳು ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ ನಗರದಲ್ಲಿ ಈತನಕ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಅಡಳಿತ ಬಂದಿಲ್ಲ.
ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆ ಸ್ಥಾಪನೆಯಾದ ಮೇಲೆ ಇದೇ ಪ್ರಥಮ ಬಾರಿಗೆ ಇಷ್ಟು ದೀರ್ಘಾವಧಿಯ ತನಕ ಕೌನ್ಸಿಲ್ ಅಸ್ಥಿತ್ವದಲ್ಲಿಲ್ಲ. ರಾಜಧಾನಿ ಬೆಂಗಳೂರಿನ ವಿಸ್ತಾರತೆಗೆ ಆಡಳಿತ ನಡೆಸಲು ಅಗತ್ಯವಾದ ಅಧಿಕಾರಿ, ಸಿಬ್ಬಂದಿ ಕೊರತೆಯಿದೆ. ಐದು ಪಾಲಿಕೆಗಳನ್ನು ಸೃಜಿಸಿ 369 ವಾರ್ಡ್ ಗಳನ್ನು ಮಾಡಿದರೂ ಇಂದಿಗೂ ರಸ್ತೆಗುಂಡಿ, ಕಸ, ಬೀದಿನಾಯಿಗಳ ಹಾವಳಿ, ಹೂಳು ತುಂಬಿದ ರಾಜಕಾಲುವೆ, ಬೀದಿ ದೀಪಗಳ ಸಮಸ್ಯೆ, ಆರೋಗ್ಯ ಸೌಲಭ್ಯಗಳ ಕೊರತೆ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆ ಮಿತಿ ಮೀರಿದೆ.

63 ವಾರ್ಡ್ ನಗರಸಭೆಯಿಂದ 369 ವಾರ್ಡ್ ಗಳ ತನಕ:
ನಾಗರೀಕರ ಬವಣೆಯನ್ನು ಆಲಿಸಲು ಸ್ಥಳೀಯವಾಗಿ ಕೌನ್ಸಿಲರ್ ಗಳಿಲ್ಲದೆ, ಸದಾ ವಿಡಿಯೋ ಕಾನ್ಫರೆನ್ಸ್, ಅದು ಇದು ಸಬೂಬು ಹೇಳಿ ಜಾರಿಕೊಳ್ಳುವ ಅಧಿಕಾರಿಗಳದ್ದೇ ಕಾರುಬಾರಾಗಿದೆ. 1971 ರಲ್ಲಿ 63 ವಾರ್ಡ್ ಗಳಿದ್ದ ನಗರಸಭೆಯಿಂದ, 1983ನೇ ಇಸವಿಯಲ್ಲಿ ಬೆಂಗಳೂರು ಸಿಟಿ ಕಾರ್ಪೊರೇಷನ್ (ಬಿಸಿಸಿ) ಆದಾಗ 87 ವಾರ್ಡ್ ಗಳಾಯಿತು. 1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಆದಾಗ 100 ವಾರ್ಡ್ ಗಳಿತ್ತು. 2007ರಲ್ಲಿ ಜನಸಂಖ್ಯೆ ಹಾಗೂ ನರಗದ ವ್ಯಾಪ್ತಿ ಬೆಳೆದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಾಗಿ ಬದಲಾಯ್ತು.
2022 ರಲ್ಲಿ ವಾರ್ಡ್ ಗಳ ಪುನರ್ ರಚನೆಯಾದಾಗ 243 ವಾರ್ಡ್ ಗಳಿಗೆ ಹಿಗ್ಗಿತು. ಇದೇ ಪಾಲಿಕೆಯನ್ನು 2023ರ ಆಗಸ್ಟ್ ನಲ್ಲಿ ವಾರ್ಡ್ ಗಳ ಮರು ವಿಂಗಡಣೆ ಮಾಡಿದಾಗ 225 ವಾರ್ಡ್ ಗಳನ್ನು ಸೃಜಿಸಲಾಯಿತು. ಆ ಬಳಿಕ 2025ರ ಸೆ.2ರಿಂದ ಐದು ನಗರ ಪಾಲಿಕೆಗಳಲ್ಲಿ ಒಟ್ಟಾರೆ 369 ವಾರ್ಡ್ ಗಳನ್ನು ರಚಿಸಲಾಯಿತು.
ಚುನಾಯಿತ ಸ್ಥಳೀಯ ಸಂಸ್ಥೆ ಆಡಳಿತ ವ್ಯವಸ್ಥೆಯಿಲ್ಲದೆ ನಗರದಲ್ಲಿ ಕಳೆದ ಆರು ವರ್ಷಗಳಿಂದ ನಗರದ ಆಡಳಿತವನ್ನು ಐಎಎಸ್ ಅಧಿಕಾರಿಗಳು (ಅಡ್ಮಿನಿಸ್ಟ್ರೇಟರ್‌ಗಳು) ಮತ್ತು ವಿವಿಧ ಸರ್ಕಾರಿ ಇಲಾಖೆಗಳೇ ಮುನ್ನಡೆಸುತ್ತಿವೆ. ಸ್ಥಳೀಯ ಸಮಸ್ಯೆಗಳನ್ನು ಆಲಿಸಲು ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು ಮೂಲಸೌಕರ್ಯ, ರಸ್ತೆ, ಮತ್ತು ಕಸದ ಸಮಸ್ಯೆಗಳಿಗಾಗಿ ಅಧಿಕಾರಿಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಚುನಾವಣೆ ವಿಳಂಬಕ್ಕೆ ಕಾರಣಗಳು:
ಬಿಬಿಎಂಪಿಯಿದ್ದಾಗ 2020 ಇಸವಿಯಿಂದ ವಾರ್ಡ್ ವಿಂಗಡಣೆ ಕಾರಣವೊಡ್ಡಿ ಆಗಿನ ಬಿಜೆಪಿ ಸರ್ಕಾರ ಪಾಲಿಕೆ ಚುನಾವಣೆಯನ್ನು ಮುಂದೆ ಹಾಕಿತು.
ವಾರ್ಡ್‌ಗಳ ಮರುವಿಂಗಡಣೆ (Delimitation), ಮೀಸಲಾತಿ ನಿಗದಿ, ಹೊಸ ಐದು ಪಾಲಿಕೆಗಳ ರಚನೆ ಹಾಗೂ ಇತ್ತೀಚೆಗೆ ಆಗಸ್ಟ್ ಅಂತ್ಯದೊಳಗೆ ಚುನಾವಣೆಗೆ ಗಡುವು ಮುಗಿಯುವ ವೇಳೆಗೆ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರಣದಿಂದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸಿತ್ತು. ಹೀಗೆ ಹಲವು ಕಾರಣಗಳಿಂದಾಗಿ ಚುನಾವಣೆಗಳು ನಿರಂತರವಾಗಿ ಮುಂದೂಡಲ್ಪಡುತ್ತಿವೆ.
ಸಂವಿಧಾನದ 74ನೇ ತಿದ್ದುಪಡಿ ಆಶಯದಂತೆ ಆಳುವ ಸರ್ಕಾರಗಳು ನಡೆದುಕೊಂಡಿದ್ದರೆ ನಗರದಲ್ಲಿ 6 ವರ್ಷಗಳ ಅವಧಿಯಲ್ಲಿ ಎರಡು ಚುನಾವಣೆಗಳು ನಡೆದಿರುತ್ತಿದ್ದವು. ತಾವು ಸಂವಿಧಾನದ ಪರಿಪಾಲಕರು ಎಂದು ಬೊಬ್ಬೆ ಹೊಡೆಯುವವರು ಚುನಾವಣೆ ನಡೆಸುವ ಬಗ್ಗೆ ಆಸಕ್ತಿ ತೋರಿಲ್ಲ. ಎಲ್ಲವೂ ಬರಿ ತೋರಿಕೆಯಾಗಿದೆ.
ಜಿಬಿಎ ಸಭೆ ಕಾಯ್ದೆಯಲ್ಲಿ ಹೇಳಿದಂತೆ ನಡೆದಿಲ್ಲ:
ಇದೇ ಸೆ.2ನೇ ತಾರೀಖಿಗೆ ನಗರದಲ್ಲಿ ಐದು ನಗರ ಪಾಲಿಕೆಗಳು ಸ್ಥಾಪನೆಯಾಗಿ ಒಂದು ವರ್ಷ ಆಗಿದೆ. 2025 ರ ಸೆ.02 ರಿಂದ 2026 ರ ಸೆ.02 ತನಕ ಒಂದೇ ಒಂದು ಜಿಬಿಎ ಸಭೆ ನಡೆದಿದೆ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2025ರ ಅಕ್ಟೋಬರ್ 10ರಂದು ಜಿಬಿಎ ಮೊದಲ ಸಭೆ ಆಯೋಜಿಸಲಾಗಿತ್ತು. ಆದರೆ 11 ತಿಂಗಳ ನಂತರ ಇದೀಗ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಧ್ಯಕ್ಷತೆಯಲ್ಲಿ ಇಂದು (ಸೆ.10) ಸಭೆ ನಿಗದಿಯಾಗಿದೆ.
ಜಿಬಿಜಿಎ ಕಾಯ್ದೆ ಏನು ಹೇಳುತ್ತೆ?:
ಜಿಬಿಎನ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (GBGA) ಅಧ್ಯಾಯ-3ರ ಪ್ರಕರಣ 12ರ ಪ್ರಕಾರ, ‘ಜಿಬಿಎ ಅಧ್ಯಕ್ಷರು (ಮುಖ್ಯಮಂತ್ರಿ) ಪ್ರತಿ ಮೂರು ತಿಂಗಳಿಗೊಮ್ಮೆ ಕನಿಷ್ಠ ಒಂದು ಬಾರಿಯಾದರೂ ಜಿಬಿಎ ಸಭೆಯನ್ನ ಕರೆಯಬೇಕು, ಅಧ್ಯಕ್ಷರು ಇಲ್ಲದಿದ್ದ ಪಕ್ಷದಲ್ಲಿ ಉಪಾಧ್ಯಕ್ಷರು (ಬೆಂಗಳೂರು ಉಸ್ತುವಾರಿ ಸಚಿವರು) ಸಭೆ ನಡೆಸಬಹುದು. ಅವರೂ ಇಲ್ಲದಿದ್ದರೆ, ಜಿಬಿಎ ಸದಸ್ಯರು ಬಹುಮತದಿಂದ ಸೂಚಿಸುವ ವ್ಯಕ್ತಿ ಸಭೆ ನಡೆಸಬೇಕು’ ಎಂದು ಹೇಳಿದೆ. ಈ ಕಾಯ್ದೆಯಲ್ಲಿ ವಿವರಿಸಿರುವಂತೆ, 2025ರ ಸೆಪ್ಟೆಂಬರ್ ನಿಂದ ಈ ತನಕ ನಾಲ್ಕು ಜಿಬಿಎ ಸಭೆಗಳು ನಡೆಯಬೇಕಿತ್ತು. ಆದರೆ ಒಂದು ವರ್ಷದ ಬಳಿಕ ಇಂದು ಸಭೆ ನಡೆಯುತ್ತಿದೆ.
ಐದು ಪಾಲಿಕೆಗಳು ಬೇಡ, ಎರಡೇ ಸಾಕೆಂಬ ಕೂಗಿಗೆ ಬಲವಿಲ್ಲ:
ಸಿಲಿಕಾನ್ ಸಿಟಿಯಲ್ಲಿ ಐದು ಪಾಲಿಕೆಗಳು ರಚನೆಯಾದರೂ, ಅಡಳಿತರೂಢ ಕಾಂಗ್ರೆಸ್ ನಾಯಕರು ಐದು ಪಾಲಿಕೆಗಳು ಅನಗತ್ಯ, ಕೇವಲ ಎರಡೇ ಪಾಲಿಕೆಗಳು ಸಾಕು ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣ, ಮತದಾರರ ಸಂಖ್ಯೆವಕಡೆಮೆಯಾಗಿದೆ, ಅದಕ್ಕೆ ಸರಿಹೊಂದುವಂತೆ ಪಾಲಿಕೆಗಳ ರಚನೆಯಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಅವರ ಬೇಡಿಕೆಗಳಿಗೆ ಹಿರಿಯ ಮುಖಂಡರುಗಳು ಸೊಪ್ಪು ಹಾಕುತ್ತಿಲ್ಲ.
ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯಾದರೂ ಪಾಲನೆಯಾಗ್ತಿಲ್ಲ:
ಒಟ್ಟಾರೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಆಶಯದಂತೆ ಸಂವಿಧಾನದ 74ನೇ ತಿದ್ದುಪಡಿ ತಂದು, ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ಹಾಗೂ ರಕ್ಷಣೆಯನ್ನು ನೀಡಿ, 1993 ರ ಜೂನ್ 1ರಂದು ಸಾಂವಿಧಾನಿಕ ತಿದ್ದುಪಡಿಯು ಕಾಯ್ದೆಯಾಗಿ ಜಾರಿಯಾಗಿದೆ. ಆದರೆ ಅದರ ಪಾಲನೆ ಮಾತ್ರ ಬೆಂಗಳೂರಿನಲ್ಲಿ ಸರಿಯಾಗಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.
ಹೀಗಾಗಿ, ದೇಶದ ಪ್ರಮುಖ ಐಟಿ ಹಬ್ ಆಗಿರುವ ಬೆಂಗಳೂರು ನಗರವು ಸುದೀರ್ಘ ಆರು ವರ್ಷಗಳಿಂದ ಮೇಯರ್ ಅಥವಾ ಕಾರ್ಪೊರೇಟರ್‌ಗಳಂತಹ ಸ್ಥಳೀಯ ಪ್ರತಿನಿಧಿಗಳಿಲ್ಲದೆಯೇ ಸದೃಢ ಆಡಳಿತವಿಲ್ಲದೆ ಸೊರಗಿದೆ.



















