ಬೆಂಗಳೂರು, ಸೆ.02 www.bengaluruwire.com: ರಾಜಧಾನಿ ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ಗುರುವಾರ ಮತ್ತು ಶುಕ್ರವಾರ ಶ್ರೀಕೃಷ್ಣನ 5,253ನೇ ಜನ್ಮದಿನೋತ್ಸವವನ್ನು ಅತ್ಯಂತ ಭಕ್ತಿ-ಭಾವ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತಾದಿಗಳ ದರ್ಶನ ಕಾರ್ಯವು ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ.
ವಿಶೇಷ ಪೂಜೆ ಮತ್ತು ಸೇವೆಗಳು:
ಉತ್ಸವದ ಅಂಗವಾಗಿ ಭಗವಂತನಿಗೆ ವಿಶೇಷ ಅಭಿಷೇಕ, ಮಂಗಳಾರತಿ, 56 ಬಗೆಯ ಪ್ರಸಾದಗಳನ್ನೊಳಗೊಂಡ ‘ಛಪ್ಪನ್ ಭೋಗ್’, ಬೆಣ್ಣೆ-ಸಕ್ಕರೆ ಸಮರ್ಪಿಸುವ ‘ಮಖನ್ ಮಿಶ್ರಿ ಸೇವೆ’, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ ಹಾಗೂ ತೊಟ್ಟಿಲು/ಜೋಕಾಲಿ ಸೇವೆ (ಜುಲನ್ ಸೇವೆ) ನಡೆಯಲಿವೆ. ಇದರೊಂದಿಗೆ ಗೋಪೂಜೆ, ಕೋಟಿ ಜಪ ಯಜ್ಞ ಹಾಗೂ ಶ್ರೀಮದ್ಭಗವದ್ಗೀತಾ ಪಾರಾಯಣಗಳು ನೆರವೇರಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು:

ಖ್ಯಾತ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು, ಮಕ್ಕಳಿಂದ ಶ್ಲೋಕ ಪಠಣ ಆಯೋಜನೆಗೊಂಡಿದೆ. ಮಕ್ಕಳಿಗೆ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ಏರ್ಪಡಿಸಲಾಗಿದ್ದು, ಆಗಮಿಸುವ ಎಲ್ಲಾ ಭಕ್ತರಿಗೂ ಪ್ರಸಾದ ವಿನಿಯೋಗವಿರಲಿದೆ. ಜೊತೆಗೆ ಇಸ್ಕಾನ್ ಸಂಸ್ಥಾಪಕರಾದ ಶ್ರೀಲ ಪ್ರಭುಪಾದರ ಜೀವನ ಮತ್ತು ಸಾಧನೆಗಳನ್ನು ಸಾರುವ ವಿಶೇಷ ಪ್ರದರ್ಶನವೂ ಇರಲಿದೆ.
‘ಸ್ವಾಗತಂ ಕೃಷ್ಣ’ ಡಿಜಿಟಲ್ ಲೈವ್ ಹಾಗೂ ರಸಪ್ರಶ್ನೆ:
ದೂರದಲ್ಲಿರುವ ಭಕ್ತರಿಗಾಗಿ ‘ಸ್ವಾಗತಂ ಕೃಷ್ಣ’ ಎಂಬ ವಿಶೇಷ ಡಿಜಿಟಲ್ ಕಾರ್ಯಕ್ರಮವನ್ನು ಇದೇ 4ರಂದು ರಾತ್ರಿ 8 ಗಂಟೆಯಿಂದ ನೇರಪ್ರಸಾರ (ಲೈವ್ ಸ್ಟ್ರೀಮ್) ಮಾಡಲಾಗುತ್ತದೆ. ಈ ವೇಳೆ ಆನ್‌ಲೈನ್ ವೀಕ್ಷಕರು ನೇರ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ವೈಟ್‌ಫೀಲ್ಡ್ ಕೆಟಿಪಿಒ ಮೈದಾನದಲ್ಲಿ ವಿಶೇಷ ಸಂಭ್ರಮ:
ನಗರದ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒ (KTPO) ಮೈದಾನದಲ್ಲಿ ನಡೆಯುವ ಜನ್ಮಾಷ್ಟಮಿ ಉತ್ಸವದಲ್ಲಿ ‘ನಿಮ್ಮ ಅಡುಗೆ ಮನೆಯಿಂದ ಕೃಷ್ಣನಿಗೆ ಪ್ರೀತಿಯಿಂದ’ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಬರೋಬ್ಬರಿ 5,253 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಶ್ರೀಕೃಷ್ಣನಿಗೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಯುವ ಬ್ಯಾಂಡ್‌ಗಳಿಂದ ‘ಕೃಷ್ಣ ಜಾಮ್‌ಫೆಸ್ಟ್ – ಭಜನ್ ಜಾಮಿಂಗ್’ ಹಾಗೂ ಜನಪ್ರಿಯ ಕಲಾವಿದ ಅಬ್ಬಿ ವಿ. ಅವರ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಲಿದೆ.



















