ಬೆಂಗಳೂರು, ಸೆ.02 www.bengaluruwire.com : ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮವನ್ನು ಅಕ್ರಮವಾಗಿ ರುದ್ರಭೂಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಕೂಗು ಮತ್ತೆ ಕೇಳಿಬಂದಿದೆ.
ಹೈಕೋರ್ಟ್ ಹಿರಿಯ ವಕೀಲ ಎನ್.ಪಿ. ಅಮೃತೇಶ್, ಕಲಾಗ್ರಾಮದಲ್ಲಿ ನಿರ್ಮಿಸಲಾಗಿರುವ ಗಣ್ಯರ ಸಮಾಧಿಗಳನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಈ ಸಂಬಂಧ ಸರ್ಕಾರಕ್ಕೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
ಕಲಾಗ್ರಾಮದ ಭೂಮಿಯು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ರಂಗ ಚಟುವಟಿಕೆಗಳ ತರಬೇತಿಗಾಗಿ ಮೀಸಲಾದ ಪವಿತ್ರ ಸ್ಥಳವಾಗಿದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಸಾಹಿತಿಗಳು ಹಾಗೂ ಗಣ್ಯರ ಅಂತ್ಯಕ್ರಿಯೆ ನಡೆಸಿ ಸಮಾಧಿ ನಿರ್ಮಿಸಲಾಗುತ್ತಿದೆ ಎಂದು ಅಮೃತೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆದೇಶವಿದ್ದರೂ ನಿಯಮ ಉಲ್ಲಂಘನೆ ಆರೋಪ:

ಕಲಾಗ್ರಾಮದಲ್ಲಿ ಯಾವುದೇ ರೀತಿಯ ಅಂತ್ಯಕ್ರಿಯೆಗಳನ್ನು ನಡೆಸದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2021ರ ಸೆಪ್ಟೆಂಬರ್ 27ರಂದೇ ಅಧಿಕೃತವಾಗಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಆದಾಗ್ಯೂ, ಸರ್ಕಾರವೇ ತನ್ನ ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಲಾಭಕ್ಕಾಗಿ 2025ರಲ್ಲಿ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಕಲಾಗ್ರಾಮದಲ್ಲಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದೆ ಡಾ. ಯು.ಆರ್. ಅನಂತಮೂರ್ತಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಸಿದ್ದಲಿಂಗಯ್ಯ ಹಾಗೂ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಸಂಸ್ಕಾರ ಇಲ್ಲಿ ನೆರವೇರಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಮಾಡಲಾಗಿರುವ ಈ ಎಲ್ಲಾ ಸಮಾಧಿಗಳನ್ನು ಕೂಡಲೇ 30 ದಿನಗಳ ಒಳಗೆ ಕಲಾಗ್ರಾಮದಿಂದ ಬೇರೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಅಮೃತೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕಲಾಗ್ರಾಮದ ನಿರ್ದೇಶಕರಿಗೆ ನೋಟಿಸ್ ರವಾನಿಸಲಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.



















