ಬೆಂಗಳೂರು, ಜು.07 www.bengaluruwire.com: “ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಹಾಗೂ ಕೇಂದ್ರ ಸರ್ಕಾರದ ಇಂಧನ ಸಚಿವಾಲಯಕ್ಕೆ (Ministry of Power) ಸೇರಿದ 100 ಕೋಟಿ ರೂ.ಗೂ ಅಧಿಕ ಮೌಲ್ಯದ 32 ಗುಂಟೆ ಜಾಗವನ್ನು ಸಚಿವ ಕೃಷ್ಣ ಭೈರೇಗೌಡರ ಆಪ್ತ, ಬಿಬಿಎಂಪಿ ಮಾಜಿ ಸದಸ್ಯ ಕೆ.ಎಂ. ಚೇತನ್ ಕಬಳಿಸಿದ್ದಾರೆ” ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್.ಆರ್. ರಮೇಶ್, “ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ: 17/1 ರಲ್ಲಿರುವ ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ಜಾಗವನ್ನು ಪಕ್ಕದಲ್ಲೇ ಇರುವ ‘ಚೇರ್ಮನ್ ಕ್ಲಬ್’ (Chairman’s Resorts) ಒತ್ತುವರಿ ಮಾಡಿಕೊಂಡಿದೆ. ಕ್ಲಬ್‌ನ ಹಾಲಿ ಅಧ್ಯಕ್ಷರಾಗಿರುವ ಕೆ.ಎಂ. ಚೇತನ್ ಹಾಗೂ ಹಿಂದಿನ ಅಧ್ಯಕ್ಷರಾಗಿದ್ದ ಅವರ ತಂದೆ ಎನ್. ಮಂಜುನಾಥ್ ಈ ಕೃತ್ಯ ಎಸಗಿದ್ದು, ಕೇಂದ್ರ ಸರ್ಕಾರದ ಜಾಗದಲ್ಲಿ ‘ತೆರೆದ ಊಟದ ಪ್ರದೇಶ’ ಮತ್ತು ‘ವಾಹನ ನಿಲ್ದಾಣ’ ನಿರ್ಮಿಸಿಕೊಂಡಿದ್ದಾರೆ,” ಎಂದು ದೂರಿದ್ದಾರೆ.


ನ್ಯಾಯಾಲಯದ ಆದೇಶಕ್ಕೂ ಕವಡೆ ಕಾಸಿನ ಬೆಲೆ ಇಲ್ಲ:
ಕೇಂದ್ರ ಸರ್ಕಾರದ ಇಂಧನ ಇಲಾಖೆಯ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋದಾಗ, ಇದೊಂದು ‘ತಪ್ಪು ಅಧಿಸೂಚನೆ’ (Wrong Notification) ಮೂಲಕ ಮಾಡಿಸಿದ ಭೂಪರಿವರ್ತನೆ ಎಂದು 2025ರ ಏಪ್ರಿಲ್ 21 ರಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ ಈವರೆಗೆ ದಾಖಲಾದ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ಸ್ವತ್ತು ಭಾರತ ಸರ್ಕಾರಕ್ಕೆ ಸೇರಿದ್ದು ಎಂದು ಉಚ್ಚ ನ್ಯಾಯಾಲಯ ಹಾಗೂ ಸಿಟಿ ಸಿವಿಲ್ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿವೆ.

ಇದಾದ ಬಳಿಕ, ಇದೇ 2026ರ ಏಪ್ರಿಲ್‌ನಲ್ಲಿ ಕೇಂದ್ರ ಇಂಧನ ಇಲಾಖೆಯ ಅಧಿಕಾರಿಗಳು ಸಚಿವ ಕೃಷ್ಣ ಭೈರೇಗೌಡರನ್ನು ಖುದ್ದಾಗಿ ಭೇಟಿ ಮಾಡಿ, ಸರ್ವೇ ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಸಚಿವರು, “ಅದೆಲ್ಲಾ ಆಗುವುದಿಲ್ಲ, ನೀವು ಇಲ್ಲಿಂದ ಹೊರ ನಡೆಯಿರಿ,” ಎಂದು ಧಮಕಿ ಹಾಕಿ ಕಳುಹಿಸಿದ್ದಾರೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ 2025ರ ಡಿಸೆಂಬರ್ 22 ರಂದು ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಒತ್ತುವರಿ ತೆರವುಗೊಳಿಸುವಂತೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು ಹಾಗೂ ಸಿಐಡಿ ತನಿಖೆಗೆ ಆಗ್ರಹ:
ಪತ್ರಿಕಾ ಹೇಳಿಕೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎನ್.ಆರ್. ರಮೇಶ್, “ನ್ಯಾಯಾಲಯಗಳ ಆದೇಶವಿದ್ದರೂ ಸಹ, ಸ್ವತಃ ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಕೇಂದ್ರ ಸರ್ಕಾರದ ಅತ್ಯಮೂಲ್ಯ ಸ್ವತ್ತನ್ನು ಕಬಳಿಸಿರುವ ಚೇರ್ಮೆನ್ ಕ್ಲಬ್ ಅಧ್ಯಕ್ಷ ಕೆ. ಎಂ. ಚೇತನ್, ಆತನ ತಂದೆ ಎನ್. ಮಂಜುನಾಥ್ ಹಾಗೂ ಇವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬೃಹತ್ ಹಗರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಲಾಗಿದೆ,” ಎಂದು ತಿಳಿಸಿದ್ದಾರೆ.




















