ಬೆಂಗಳೂರು, ಜು.05 www.bengaluruwire.com: ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳಿಗೆ ಬೆಸ್ಕಾಂ ಸ್ಪಷ್ಟನೆಯೊಂದನ್ನು ನೀಡಿದೆ.
ಜುಲೈ 1 ರಿಂದ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಆರಂಭಗೊಂಡಿದ್ದು, ಬಾಡಿಗೆದಾರರು ಆಧಾರ್ ಮಾಹಿತಿ ಅಪ್ಡೇಟ್ ಕುರಿತು ಯಾವುದೇ ಗೊಂದಲ ಅಥವಾ ಆತಂಕ ಪಡಬೇಕಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ (Door-to-door survey) ಕಾರ್ಯವನ್ನು ನಡೆಸುತ್ತಿದ್ದಾರೆ. ಈ ವೇಳೆ ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಿ, ಪ್ರಸ್ತುತ ಇರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ತಮಗೆ ಉಚಿತ ವಿದ್ಯುತ್ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕವನ್ನು ಬಾಡಿಗೆದಾರರು ಬಿಡಬೇಕು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಗೊಂದಲಕ್ಕೆ ಕಾರಣವೇನು?:

ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ? ಅಥವಾ ಹಿಂದಿನವರು ಖಾಲಿ ಮಾಡಿದ ಬಳಿಕ ನಮಗೆ ಗೃಹ ಜ್ಯೋತಿ ಸೌಲಭ್ಯ ಸಿಗುವುದಿಲ್ಲವೇ? ಎಂಬ ಆತಂಕ ಈಗಿನ ಬಾಡಿಗೆದಾರರಿಗೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಸ್ಕಾಂ, ಗ್ರಾಹಕರಿಗೆ ಈ ಸ್ಪಷ್ಟನೆ ನೀಡಿದೆ. ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ಕಾರ್ಡ್ ಮತ್ತು ವಿವರಗಳನ್ನು ತೆಗೆದುಹಾಕಿ, ಹೊಸ ಬಾಡಿಗೆದಾರರ ಆಧಾರ್ ಸಂಖ್ಯೆ ನಮೂದು ಮಾಡಿಕೊಳ್ಳಲಾಗುತ್ತದೆ. ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.
ಕಚೇರಿಗೆ ಅಲೆಯುವಂತಿಲ್ಲ, ಇಲ್ಲಿವೆ ಪ್ರಮುಖ ಅಂಶಗಳು:
ಮನೆ ಬಾಗಿಲಲ್ಲಿ ಸೇವೆ: ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಬೆಸ್ಕಾಂ ಕಚೇರಿಗಳಿಗೆ ಅಲೆಯಬೇಕಾದ ಅಗತ್ಯವಿಲ್ಲ.
ದಾಖಲೆಗಳ ಪರಿಶೀಲನೆ: ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆಯ ಸಮಯದಲ್ಲಿ ನಿಮ್ಮ ಆಧಾರ್ ಮತ್ತು ಬಾಡಿಗೆ/ಲೀಸ್ ಕರಾರು (Rental/Lease agreement) ವಿವರಗಳನ್ನು ಅಪ್‌ಡೇಟ್ ಮಾಡಲಿದ್ದಾರೆ.
ಸಾಮಾನ್ಯ ಪ್ರಕ್ರಿಯೆ: ಇದೊಂದು ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ.
ಮಾಲೀಕರ ಸಹಕಾರ: ಬಾಡಿಗೆದಾರರು ಯಾವುದೇ ಆತಂಕವಿಲ್ಲದೆ ಬೆಸ್ಕಾಂ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು. ಜೊತೆಗೆ ಮನೆ ಮಾಲೀಕರು ಕೂಡ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ-ವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಬಹುದು:
ಬೆಸ್ಕಾಂ ಸಹಾಯವಾಣಿ ಸಂಖ್ಯೆ: 1912
ವಿಶೇಷ ವಾಟ್ಸಾಪ್ (WhatsApp) ಸಂಖ್ಯೆಗಳು: 9480816111, 9480816112, 9480816113, 9480816114
(ಸಮಯ: ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಸಹಾಯವಾಣಿ ಲಭ್ಯವಿರುತ್ತದೆ).





















