ಬೆಂಗಳೂರು, ಜು.05 www.bengaluruwire.com: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್ ಬೆಂಗಳೂರು ಆಡಳಿತ’ (GBA) ವ್ಯವಸ್ಥೆಯಡಿ ಬೆಂಗಳೂರು ಪೂರ್ವ ನಗರ ಪಾಲಿಕೆಯು ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಸ್ವತಂತ್ರ ಆಡಳಿತ ಹಾಗೂ ಪ್ರತ್ಯೇಕ ಬಜೆಟ್ ಹೊಂದಿರುವ ಪೂರ್ವ ನಗರ ಪಾಲಿಕೆಯು ಪ್ರಸಕ್ತ ಸಾಲಿಗೆ ₹3,800 ರಿಂದ ₹3,900 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಬಜೆಟ್ ರೂಪಿಸಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ವಾರ್ಡ್ ಸಮಿತಿಗಳ ಸಹಯೋಗದಲ್ಲಿ ‘ವೈಟ್‌ಫೀಲ್ಡ್ ರೈಸಿಂಗ್’ ಆಯೋಜಿಸಿದ್ದ “ಹೊಸ ಪೂರ್ವವನ್ನು ನಿರ್ಮಿಸುವುದು – ಆಡಳಿತ, ಹೊಣೆಗಾರಿಕೆ ಮತ್ತು ಸೇವಾ ವಿತರಣೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಭವಿಷ್ಯದ ಕಾರ್ಯತಂತ್ರಗಳನ್ನು ಜನರ ಮುಂದಿಟ್ಟರು.
ಡಿಜಿಟಲ್ ಡ್ಯಾಶ್‌ಬೋರ್ಡ್: ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ:
ನಗರದ ಅಭಿವೃದ್ಧಿ ಕಾಮಗಾರಿಗಳ ವೆಚ್ಚ, ಪ್ರಗತಿ ಹಾಗೂ ಗುಣಮಟ್ಟವನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ‘ಡಿಜಿಟಲ್ ಡ್ಯಾಶ್‌ಬೋರ್ಡ್’ ಜಾರಿಗೊಳಿಸಲಾಗುತ್ತಿದೆ. ನಾಗರಿಕರು ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇದು ಸಹಕಾರಿಯಾಗಲಿದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ ನೀಗಿಸಲು (ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್ ಇತ್ಯಾದಿ) ಹೊಸ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಆಯುಕ್ತರು ವಿವರಿಸಿದರು.


ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕು:
ಪಾದಚಾರಿಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪಾಲಿಕೆಯ ಎಂಟು ಎಂಜಿನಿಯರಿಂಗ್ ವಿಭಾಗಗಳಲ್ಲಿ ತಲಾ ಕನಿಷ್ಠ 10 ಕಿ.ಮೀ. ಅಡೆತಡೆ ರಹಿತ ಪಾದಚಾರಿ ಮಾರ್ಗ ನಿರ್ಮಿಸುವ ಗುರಿ ಹೊಂದಲಾಗಿದೆ. ಕಳೆದ 4 ದಿನಗಳಲ್ಲಿಯೇ ಬರೋಬ್ಬರಿ 43 ಕಿ.ಮೀ. ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗಿದೆ. ತೆರವುಗೊಂಡ ಮಾರ್ಗಗಳಲ್ಲಿ ಶೀಘ್ರವೇ ದುರಸ್ತಿ ಹಾಗೂ ಸುಧಾರಣಾ ಕಾರ್ಯ ನಡೆಯಲಿದೆ.
ಟ್ರಾಫಿಕ್ ಫ್ರೀ ಹಾಗೂ ಪ್ರವಾಹ ಮುಕ್ತ ಪೂರ್ವ ಬೆಂಗಳೂರು:
ಸಂಚಾರ ದಟ್ಟಣೆ ನಿಯಂತ್ರಣ: ಪಣತ್ತೂರು, ಗುಂಜೂರು ಹಾಗೂ ಕಾರ್ಮೇಲರಾಂ ಭಾಗದ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಒತ್ತು. ಭೂಸ್ವಾಧೀನ ಹಾಗೂ ಟಿಡಿಆರ್ (TDR) ಪ್ರಕ್ರಿಯೆಗೆ ವೇಗ ನೀಡಿ, ಪ್ರಮುಖ ರಸ್ತೆಗಳಿಗೆ ವಿಶೇಷ ಅನುದಾನ ಮೀಸಲು.
ಪ್ರವಾಹಕ್ಕೆ ಶಾಶ್ವತ ಪರಿಹಾರ: ವಿಶ್ವಬ್ಯಾಂಕ್ ನೆರವಿನ ಯೋಜನೆಗಳಡಿ ರಾಜಕಾಲುವೆಗಳ ನೈಸರ್ಗಿಕ ಅಗಲವನ್ನು ವೈಜ್ಞಾನಿಕವಾಗಿ ಮರುಸ್ಥಾಪಿಸಿ, ಮಳೆನೀರು ಸರಾಗವಾಗಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ.
ಕಸದ ಸಮಸ್ಯೆಗೆ ಹೈಟೆಕ್ ಪರಿಹಾರ ಹಾಗೂ ಅಕ್ರಮಗಳಿಗೆ ಬ್ರೇಕ್:
ಘನತ್ಯಾಜ್ಯ ನಿರ್ವಹಣೆ: ಮನೆ-ಮನೆಯಿಂದ ಕಸ ಸಂಗ್ರಹಿಸಲು ಹೊಸ ಟೆಂಡರ್ ಮೂಲಕ ಹೆಚ್ಚಿನ ಆಟೋ ಟಿಪ್ಪರ್‌ಗಳ ನಿಯೋಜನೆ. ಪ್ರಸ್ತುತ ಶೇ.40-50ರಷ್ಟಿರುವ ಮೂಲ ಕಸ ವಿಂಗಡಣೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ.
ಸಿಸಿಟಿವಿ ಕಣ್ಗಾವಲು: ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಮತ್ತು ಕಸ ಸುರಿಯುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಪೊಲೀಸರ ನೆರವಿನೊಂದಿಗೆ ಕಠಿಣ ಕಾನೂನು ಕ್ರಮ.
ಅಕ್ರಮ ಕಟ್ಟಡಗಳಿಗೆ ಎಚ್ಚರಿಕೆ: ಹೊಸದಾಗಿ ತಲೆ ಎತ್ತುವ ಯಾವುದೇ ಅಕ್ರಮ ನಿರ್ಮಾಣಗಳನ್ನು ಸಹಿಸುವುದಿಲ್ಲ. ನ್ಯಾಯಾಲಯದ ಆದೇಶದನ್ವಯ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ವಾರ್ಡ್ ಸಮಿತಿಗಳಿಗೆ ಶಕ್ತಿ; ನಾಗರಿಕರ ಸಹಭಾಗಿತ್ವಕ್ಕೆ ಕರೆ:
ಬಜೆಟ್ ಪ್ರಕ್ರಿಯೆ ಮತ್ತು ಯೋಜನೆಗಳ ರೂಪಿಸುವಿಕೆಯಲ್ಲಿ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಉತ್ತಮ ಆಡಳಿತ ಸಾಧ್ಯವಿಲ್ಲ. ಕಸ ವಿಂಗಡಣೆ, ಒತ್ತುವರಿ ಮಾಹಿತಿ ಹಾಗೂ ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಡಿ.ಎಸ್. ರಮೇಶ್ ಮನವಿ ಮಾಡಿದರು.
ಸಂವಾದದಲ್ಲಿ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಬಿಎಂಟಿಸಿ, ಜಲಮಂಡಳಿ, ಬೆಸ್ಕಾಂ ಮತ್ತು ಸಂಚಾರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





















