ಬೆಂಗಳೂರು, ಜು.06 www.bengaluruwire.com: ಮಳೆ ಕೊರತೆಯ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕುಡಿಯುವ ನೀರನ್ನು ಪೋಲು ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ವಾಹನ ತೊಳೆಯುವುದು, ಕೈತೋಟ ಸೇರಿದಂತೆ ವಿವಿಧ ಅನಗತ್ಯ ಉದ್ದೇಶಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರದಲ್ಲಿ ಖಾಯಂ ನಿವಾಸಿಗಳು ಹಾಗೂ ವಲಸಿಗರು ಸೇರಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಇದೆ. ಈ ಬೃಹತ್ ಜನಸ್ತೋಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕುಡಿಯುವ ನೀರನ್ನು ಸಾರ್ವಜನಿಕರು ಹಿತವಾಗಿ ಬಳಸುವಂತೆ ಮಂಡಳಿ ಮನವಿ ಮಾಡಿದೆ.
ಈ ಕೆಳಕಂಡ ಕೆಲಸಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ:

BWSSB ಕಾಯ್ದೆ 1964ರ ಕಲಂ 33 ಮತ್ತು 34ರ ಅನ್ವಯ, ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:
ವಾಹನಗಳ ಸ್ವಚ್ಛತೆಗೆ (Washing Vehicles).
ಗಿಡ-ಮರಗಳಿಗೆ ಅಥವಾ ಕೈತೋಟಕ್ಕೆ (Gardening).
ಹೊಸ ಕಟ್ಟಡ ನಿರ್ಮಾಣಕ್ಕೆ.
ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ (Fountains).
ಸಿನಿಮಾ ಮಂದಿರ ಮತ್ತು ಮಾಲ್ ಗಳಲ್ಲಿನ ಕುಡಿಯುವ ನೀರಿನ ಹೊರತುಪಡಿಸಿ ಇನ್ನಿತರೆ ಬಳಕೆಗೆ.
ರಸ್ತೆ ನಿರ್ಮಾಣ ಮತ್ತು ಸ್ವಚ್ಛತಾ ಕಾರ್ಯಗಳಿಗೆ.
ನಿಯಮ ಉಲ್ಲಂಘಿಸಿದರೆ 5000 ರೂ. ದಂಡ ಖಚಿತ:
ಮಂಡಳಿಯ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಪೋಲು ಮಾಡಿದರೆ, ಜಲಮಂಡಳಿಯ ಕಾಯ್ದೆ 1964ರ ಕಲಂ 109ರ ಅಡಿ ರೂ. 5000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಉಲ್ಲಂಘನೆಯ ಪ್ರಕರಣಗಳು ಮರುಕಳಿಸಿದರೆ, ಮೂಲ ದಂಡ ರೂ. 5000 ದ ಜೊತೆಗೆ ಪ್ರತಿದಿನ ರೂ. 500 ರಂತೆ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.
ದೂರು ನೀಡಲು ಸಹಾಯವಾಣಿ:
ಸಾರ್ವಜನಿಕರು ತಮ್ಮ ಸುತ್ತಮುತ್ತ ಅಥವಾ ಬಡಾವಣೆಗಳಲ್ಲಿ ಯಾರಾದರೂ ಕುಡಿಯುವ ನೀರನ್ನು ಮೇಲ್ಕಂಡ ನಿಷೇಧಿತ ಉದ್ದೇಶಗಳಿಗೆ ಬಳಸಿ ಪೋಲು ಮಾಡುತ್ತಿರುವುದು ಕಂಡುಬಂದರೆ, ಕೂಡಲೇ BWSSB ಕಾಲ್ ಸೆಂಟರ್ ಸಂಖ್ಯೆ: 1916 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.





















