ಬೆಂಗಳೂರು, ಆ.8 www.bengaluruwire.com : ನಗರದಲ್ಲಿ ಹೈಕೋರ್ಟ್ ನಿರ್ದೇಶನದಂತೆ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧಿಸಲಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಿರ್ಬಂಧ ಹೇರಲಾಗುತ್ತದೆ. ಇದನ್ನು ಮೀರಿ ಯಾರಾದರೂ ಫ್ಲೆಕ್ಸ್, ಬ್ಯಾನರ್ ಹಾಕಿದಲ್ಲಿ 50,000 ರೂ. ದಂಡ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬ್ಯಾನರ್, ಫ್ಲೆಕ್ಸ್ ಯಾರದೇ ಆಗಿರಲಿ ಸಂಪೂರ್ಣ ನಿಷೇಧಿಸಲಾಗಿದೆ.
ಯಾರೂ ಕೂಡ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಬಾರದು. ಯಾರ ಹೆಸರಿನಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕಿದರೆ ಅವರಿಗೂ 50,000 ರೂ. ದಂಡ ವಿಧಿಸಲಾಗುವುದು. ಇನ್ನು ಮುಂದೆ ಎಫ್‌ಐಆರ್ ಕೂಡ ದಾಖಲಿಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಯಾವುದಾದರೂ ಫ್ಲೆಕ್ಸ್, ಬ್ಯಾನರ್ ಹಾಕುವಂತಹ ಪ್ರಸಂಗ ಬಂದರೆ ಸರ್ಕಾರದಿಂದ ನಿಯಮ ರೂಪಿಸಲಾಗುತ್ತದೆ. ಅಕ್ರಮವಾಗಿ ಯಾರೂ ಫ್ಲೆಕ್ಸ್ ಹಾಕುವಂತಿಲ್ಲ. ಪ್ರಸ್ತುತ ಇರುವ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ಹೈಕೋರ್ಟ್ ಆದೇಶ ಕೂಡ ಇದ್ದು, ಬೆಂಗಳೂರಿನಲ್ಲಿರುವ ಪ್ಲೆಕ್ಸ್, ಬ್ಯಾನರ್ ಗಳನ್ನು ತೆರವು ಮಾಡಲಾಗುವುದು.

ಶುಭ ಹಾರೈಕೆ, ಹುಟ್ಟು ಹಬ್ಬ, ಶ್ರದ್ಧಾಂಜಲಿ ಮೊದಲಾದ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ಮಲ್ಟಿ ನ್ಯಾಷನಲ್ ಹೋಲ್ಡಿಂಗ್ಸ್ ತೆರವುಗೊಳಿಸಲು ಹೇಳಲಾಗಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್ ತೆರವಿಗೆ ಕೋರ್ಟ್ ಮೂರು ವಾರಗಳ ಗಡವು ನೀಡಿದೆ. ನನ್ನದೂ, ಮುಖ್ಯಮಂತ್ರಿಗಳದ್ದೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ನಮ್ಮ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ.




















