ಬೆಂಗಳೂರು, ಜು.06 www.bengaluruwire.com: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್ – SIR) ಕಾರ್ಯದೊತ್ತಡದಿಂದಾಗಿ ಮೂವರು ಅಧಿಕಾರಿಗಳು ಹೃದಯಾಘಾತದಿಂದ ಮೃತಪಟ್ಟಿರುವ ಬೆಚ್ಚಿಬೀಳಿಸುವ ಘಟನೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನೌಕರರ ಮೇಲೆ ಯಾವುದೇ ಒತ್ತಡ ಹೇರದೆ, ಭಯಪಡಿಸದೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ‘ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘವು’ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ಸಿಬ್ಬಂದಿ ಕೊರತೆ ಮತ್ತು ಹೆಚ್ಚಿದ ಕೆಲಸದ ಹೊರೆ:
ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಕಂದಾಯ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮಹಾನಗರ ಪಾಲಿಕೆ, ಪುರಸಭೆ ಹಾಗೂ ನಗರ ಸಭೆಗಳಲ್ಲಿ ತೀವ್ರ ಸಿಬ್ಬಂದಿ ಕೊರತೆಯಿದೆ. ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ಕೇವಲ ಒಂದೇ ವಾರದಲ್ಲಿ ಈ ಅಧಿಕ ಕಾರ್ಯದೊತ್ತಡವನ್ನು ತಾಳಲಾರದೆ ಮೂವರು ನೌಕರರು ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕ ಮರಣ ಹೊಂದಿದ್ದಾರೆ.

ರಾಜ್ಯದಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಯಲ್ಲಿಯೇ ಅಂದಾಜು 7 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡದ ಕಾರಣ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೆರಳೆಣಿಕೆಯ ನೌಕರರ ಮೇಲೆಯೇ ಅತಿಯಾದ ಕೆಲಸದ ಹೊರೆ ಬಿದ್ದಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಇಲಾಖೆಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ವಯೋಸಹಜ ಕಾಯಿಲೆಗಳ ನಡುವೆಯೂ ಸೇವೆ, ಆದರೂ ಬೆದರಿಕೆ:
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನೌಕರರ ಪೈಕಿ ಶೇ. 70ರಷ್ಟು ಸಿಬ್ಬಂದಿ 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇವರಲ್ಲಿ ಬಹುತೇಕರು ಸಕ್ಕರೆ ಕಾಯಿಲೆ, ರಕ್ತದೊತ್ತಡ (BP), ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳ ನಡುವೆಯೂ ಸರ್ಕಾರದ ಆದೇಶವನ್ನು ಗೌರವಿಸಿ ಎಸ್‌ಐಆರ್ ಕಾರ್ಯವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಆದರೆ, ಎಸ್‌ಐಆರ್ ಉಸ್ತುವಾರಿ ವಹಿಸಿರುವ ಉನ್ನತ ಅಧಿಕಾರಿಗಳು ಇದ್ಯಾವುದನ್ನೂ ಪರಿಗಣಿಸದೆ, ಕೆಳಹಂತದ ಅಧಿಕಾರಿಗಳು ಮತ್ತು ನೌಕರರನ್ನು ಅಮಾನತು ಮಾಡುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಅನಗತ್ಯ ಒತ್ತಡ ಹೇರುವುದು ಹಾಗೂ ಆತ್ಮಸ್ಥೈರ್ಯ ಕುಗ್ಗಿಸುವಂತಹ ದಬ್ಬಾಳಿಕೆಯ ಕ್ರಮಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಅಮೃತ್‌ರಾಜ್ ಅವರು ಮನವಿ ಮಾಡಿದ್ದಾರೆ.




















