ಬೆಂಗಳೂರು, ನ.19 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಜೆಟ್ಟಿಂಗ್ ಯಂತ್ರಗಳನ್ನು ಬಳಸಿ ತೀವ್ರ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಾರ್ಡ್ ಒನ್ ಅಭಿಯಾನದ ಪ್ರಗತಿ ಕುರಿತು ಗುರುವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ನಗರವು ಸುಂದರವಾಗಿ ಕಾಣಬೇಕಾದರೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಜೆಟ್ಟಿಂಗ್ ಯಂತ್ರಗಳ ಮೂಲಕ ಜಂಕ್ಷನ್‌ಗಳು, ರಸ್ತೆ ಬದಿಯ ಗೋಡೆಗಳು, ಪಾದಚಾರಿ ಮಾರ್ಗಗಳು, ಬಸ್ ತಂಗುದಾಣಗಳು ಹಾಗೂ ಮೇಲ್ಸೇತುವೆಗಳ ಪಿಲ್ಲರ್‌ಗಳನ್ನು ಪ್ರೆಶರ್ ವಾಷ್ ಮಾಡಿ ನಗರದ ಅಂದ ಹೆಚ್ಚಿಸುವಂತೆ ನಿರ್ದೇಶಿಸಿದರು.
ಸ್ವಚ್ಛತೆಗೆ ಸಂಸ್ಕರಿಸಿದ ನೀರಿನ ಬಳಕೆ: ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ಕೆ ಜಲಮಂಡಳಿಯ (BWSSB) ಸಮೀಪದ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಕರಣಾ ಘಟಕಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕೂಡಲೇ ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛತಾ ಕಾರ್ಯ ಆರಂಭಿಸುವಂತೆ ಸಚಿವರು ತಿಳಿಸಿದರು.
ವಾರ್ಡ್ ಒನ್ ಅಭಿಯಾನಕ್ಕೆ ವೇಗ:

ನವೆಂಬರ್ 1ರಿಂದ ಆರಂಭವಾಗಿರುವ ‘ವಾರ್ಡ್ ಒನ್ ಅಭಿಯಾನ’ದಡಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಇದೇ ಶನಿವಾರ, ನವೆಂಬರ್ 21ರಂದು ನಡೆಯಲಿರುವ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕೋಣನಕುಂಟೆ ಕ್ರಾಸ್ ಅಭಿವೃದ್ಧಿಗೆ ಕ್ರಮ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋಣನಕುಂಟೆ ಕ್ರಾಸ್‌ನ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವಂತೆ ಸಚಿವರು ತಿಳಿಸಿದರು. ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಜಂಕ್ಷನ್‌ನಲ್ಲಿರುವ ಐಲ್ಯಾಂಡ್ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು. ಜೊತೆಗೆ ಸಂಚಾರ ದಟ್ಟಣೆ ನಿವಾರಿಸಲು ಲೇನ್ ಮಾರ್ಕಿಂಗ್ ಮತ್ತು ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನಿಲ್ ಕುಮಾರ್, ಶಿಲ್ಪಾ ನಾಗ್, ರಮೇಶ್ ಕೆ.ಎನ್., ಜಗದೀಶ್ ಜಿ. ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಅಭಿಯಂತರರು ಉಪಸ್ಥಿತರಿದ್ದರು.


















