ಬೆಂಗಳೂರು, ನ.19 (www.bengaluruwire.com): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ನಾಗರಿಕರ ದೈನಂದಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಆಲಿಸಿ ಪರಿಹರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಜನಸಭೆಗಳ ಮಾದರಿಯಲ್ಲೇ, ರಾಜಧಾನಿಯ ಆಡಳಿತಾತ್ಮಕ ರಚನೆಗೆ ಪೂರಕವಾಗಿ ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ‘ಪ್ರಜಾ ಸೇವಾ ಅಭಿಯಾನ (ಪಿಎಸ್‌ಎ) ಜನಸಭೆ’ಗಳನ್ನು ಆಯೋಜಿಸುವಂತೆ ಪ್ರಜಾಸೇವಾ ಇಲಾಖೆ ನೂತನ ಸುತ್ತೋಲೆ ಹೊರಡಿಸಿದೆ.
ಎರಡು ಹಂತಗಳಲ್ಲಿ ಜನಸಭೆ ಆಯೋಜನೆ: ಜಿಬಿಎ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳು, 10 ವಲಯಗಳು, 50 ವಿಭಾಗಗಳು, 150 ಉಪವಿಭಾಗಗಳು, 369 ವಾರ್ಡ್‌ಗಳು ಹಾಗೂ 28 ವಿಧಾನಸಭಾ ಕ್ಷೇತ್ರಗಳ ನಾಗರಿಕರಿಗೆ ಅನುಕೂಲವಾಗುವಂತೆ ವಲಯ ಮತ್ತು ಉಪವಿಭಾಗ ಮಟ್ಟದಲ್ಲಿ ಸಭೆಗಳನ್ನು ನಡೆಸಲು ಸರ್ಕಾರ ಅನುಮೋದನೆ ನೀಡಿದೆ.
1. ವಲಯ ಮಟ್ಟದ ಜನಸಭೆ (ತಾಲ್ಲೂಕು ಮಟ್ಟಕ್ಕೆ ಸಮಾನ): ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯ ಒಂದು ಸ್ಥಳದಲ್ಲಿ ಈ ಸಭೆ ನಡೆಯಲಿದೆ. ಮೊದಲಿಗೆ 10 ವಲಯಗಳ ಕೇಂದ್ರ ಕಚೇರಿಗಳಲ್ಲಿ ಸರದಿಯಂತೆ ಆಯೋಜಿಸಿ, ನಂತರ ವಿಭಾಗ ಕೇಂದ್ರ ಕಚೇರಿಗಳಲ್ಲಿ ನಡೆಸಲಾಗುತ್ತದೆ.

ಅಧ್ಯಕ್ಷತೆ: ತಿಂಗಳ ಮೊದಲನೇ, ಮೂರನೇ ಮತ್ತು ಐದನೇ ಶನಿವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು, ಆಯಾ ವಲಯದಲ್ಲಿ ಅತಿ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸುವರು.
ಅಧಿಕಾರಿಗಳ ಹಾಜರಾತಿ: ಜಿಬಿಎ, ನಗರ ಪಾಲಿಕೆ ಮಟ್ಟದ ಅಧಿಕಾರಿಗಳು, ವಲಯ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ನಗರ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲಿದ್ದಾರೆ.
2. ಉಪವಿಭಾಗ ಮಟ್ಟದ ಜನಸಭೆ (ಹೋಬಳಿ ಮಟ್ಟಕ್ಕೆ ಸಮಾನ): ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವನ್ನು ಹೊರತುಪಡಿಸಿ, ಉಳಿದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಶನಿವಾರ ಆಯಾ ಕ್ಷೇತ್ರದ ಉಪವಿಭಾಗಗಳಲ್ಲಿ ಸರದಿಯಂತೆ ಈ ಸಭೆ ನಡೆಯಲಿದೆ. ಎಲ್ಲಾ ಉಪವಿಭಾಗಗಳು ಪೂರ್ಣಗೊಂಡ ಬಳಿಕ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತದೆ.
ಸ್ಥಳೀಯ ಶಾಸಕರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ವಿಭಾಗ ಮತ್ತು ಉಪವಿಭಾಗ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವಿಶೇಷವೆಂದರೆ, ಯಾವ ಶನಿವಾರ ಒಂದು ವಲಯದಲ್ಲಿ ವಲಯ ಮಟ್ಟದ ಜನಸಭೆ ನಡೆಯುತ್ತದೆಯೋ, ಅಂದು ಆ ವಲಯದಲ್ಲಿ ಪ್ರತ್ಯೇಕ ಉಪವಿಭಾಗ ಮಟ್ಟದ ಜನಸಭೆ ಇರುವುದಿಲ್ಲ; ಬದಲಾಗಿ ಅವು ವಲಯ ಮಟ್ಟದ ಸಭೆಯಲ್ಲೇ ವಿಲೀನಗೊಳ್ಳಲಿವೆ.
ಪ್ರಮುಖ ಇಲಾಖೆಗಳ ಸಮನ್ವಯ ಮತ್ತು ಸ್ಥಳದಲ್ಲೇ ಪರಿಹಾರ: ಜಿಬಿಎ ಮುಖ್ಯ ಆಯುಕ್ತರು ಈ ಅಭಿಯಾನದ ಒಟ್ಟಾರೆ ಸಮನ್ವಯ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, 5 ನಗರ ಪಾಲಿಕೆಗಳ ಆಯುಕ್ತರು ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದಾರೆ. ನಾಗರಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು (ಕಂದಾಯ), ಜಲಮಂಡಳಿ (BWSSB), ಬೆಸ್ಕಾಂ (BESCOM), ಬಿಎಂಟಿಸಿ (BMTC), ಬಿಡಿಎ (BDA) ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲು ಸೂಚಿಸಲಾಗಿದೆ.
ಟೋಕನ್ ವ್ಯವಸ್ಥೆ ಮತ್ತು ಪೂರ್ವಭಾವಿ ಅಭಿಯಾನ: ಸಭೆಗೂ ಮುನ್ನ ಸಾರ್ವಜನಿಕರಿಂದ ಅರ್ಜಿಗಳನ್ನು ಸಂಗ್ರಹಿಸಲು ಪೂರ್ವಭಾವಿ ಅಭಿಯಾನ ನಡೆಯಲಿದೆ. ಸಭೆಯ ಸ್ಥಳದಲ್ಲಿ ಪ್ರತಿ ವಾರ್ಡ್ ಅಥವಾ ವಾರ್ಡ್‌ಗಳ ಗುಂಪಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು ಹಾಗೂ ಜನದಟ್ಟಣೆ ತಪ್ಪಿಸಲು ಟೋಕನ್ ವ್ಯವಸ್ಥೆ ಜಾರಿಯಲ್ಲಿರಲಿದೆ. ಒಂದು ವೇಳೆ ಶನಿವಾರ ಸರ್ಕಾರಿ ರಜಾದಿನವಾಗಿದ್ದರೆ ಅಂದು ಜನಸಭೆ ನಡೆಯುವುದಿಲ್ಲ. ಅಧ್ಯಕ್ಷರು ಲಭ್ಯವಿಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಸಭೆಯನ್ನು ಮುನ್ನಡೆಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಜನಸಭೆಗಳಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















