ಬೆಂಗಳೂರು, ನ.16 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪಂಚಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿವಿಧ 29 ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಸರ್. ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಸೋಮವಾರ, ಸಾಮೂಹಿಕ ರಜೆ ಹಾಕಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.
ಅಮಾನತು ಆದೇಶಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ನವೆಂಬರ್ 30ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 1ರಿಂದ ಪಂಚಪಾಲಿಕೆಗಳ ಸೇವೆಯನ್ನು ಸ್ಥಗಿತಗೊಳಿಸಿ ಬಂದ್ ಹಾಗೂ ಮುಷ್ಕರ ನಡೆಸಲಾಗುವುದು ಎಂದು ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಪ್ರತಿಭಟನಾ ಸಭೆಯಲ್ಲಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಸೇರಿದಂತೆ ಕಂದಾಯ, ಆರೋಗ್ಯ, ತೋಟಗಾರಿಕೆ ಮತ್ತು ಇಂಜಿನಿಯರಿಂಗ್ ವಿಭಾಗದ ನೂರಾರು ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.
ಒತ್ತಡದ ಕೆಲಸದಿಂದ 15ಕ್ಕೂ ಹೆಚ್ಚು ನೌಕರರ ಸಾವು: ಅಮೃತ್ ರಾಜ್ ಆಕ್ರೋಶ: ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಎ. ಅಮೃತ್ ರಾಜ್, “ಕಂದಾಯ ವಿಭಾಗದಲ್ಲಿ ದಿನಕ್ಕೊಂದು ಕಾನೂನು ರೂಪಿಸಿ ಅಧಿಕಾರಿ, ನೌಕರರಿಗೆ ಮಾನಸಿಕ ಹಿಂಸೆ ನೀಡಿ ವಿನಾಕಾರಣ ಅಮಾನತು ಮಾಡಲಾಗುತ್ತಿದೆ. ವಿಪರೀತ ಕೆಲಸದ ಒತ್ತಡದಿಂದ ಈಗಾಗಲೇ 15ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ 1.50 ಲಕ್ಷ ಸಿಬ್ಬಂದಿ ಇದ್ದರೆ, ಬೆಂಗಳೂರಿನಲ್ಲಿ ಕೇವಲ 3,000 ಅಧಿಕಾರಿ, ನೌಕರರು ಹಾಗೂ 10,000 ಪೌರಕಾರ್ಮಿಕರಿದ್ದಾರೆ. ಇಂತಹ ಸಿಬ್ಬಂದಿ ಕೊರತೆಯ ನಡುವೆಯೂ ಜನಗಣತಿ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ” ಎಂದು ಹೇಳಿದರು.

ನೌಕರರ ಪ್ರಮುಖ ಬೇಡಿಕೆಗಳು:
* ಐದು ಪಾಲಿಕೆಗಳಲ್ಲಿ ಖಾಲಿ ಇರುವ ಸುಮಾರು 3,800 ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಕೆಲಸದ ಒತ್ತಡ ಕಡಿಮೆ ಮಾಡಬೇಕು.
* ಹೊಸ ವೃಂದ ಮತ್ತು ನೇಮಕಾತಿ (C&R) ನಿಯಮಗಳನ್ನು ಜಾರಿಗೆ ತರಬೇಕು.
* ಬಡ್ತಿ, ವರ್ಗಾವಣೆ, ವೇತನ ಮತ್ತು ಸೇವಾ ಸೌಲಭ್ಯಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು.
* ಏಕಾಏಕಿ ಅಮಾನತುಗೊಂಡಿರುವ ಅಧಿಕಾರಿ ಮತ್ತು ನೌಕರರ ಅಮಾನತು ಆದೇಶವನ್ನು ಹಿಂಪಡೆಯಬೇಕು.
* ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ನೌಕರರು ಮತ್ತು ಅವರ ಕುಟುಂಬಕ್ಕೆ ನಗದುರಹಿತ (Cashless) ಆರೋಗ್ಯ ಚಿಕಿತ್ಸೆ ಕಲ್ಪಿಸಬೇಕು.
“ನಮ್ಮ ಬೇಡಿಕೆಗಳಿಗೆ ಸಚಿವರು ಸ್ಪಂದಿಸಿದ್ದು, ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ ನವೆಂಬರ್ 30ರ ಗಡುವಿನೊಳಗೆ ಬೇಡಿಕೆಗಳು ಈಡೇರದಿದ್ದರೆ ಡಿಸೆಂಬರ್ 1ರಿಂದ ಪಂಚಪಾಲಿಕೆ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಅಮೃತ್ ರಾಜ್ ಸ್ಪಷ್ಟಪಡಿಸಿದರು.
ಪರಿಶೀಲಿಸದೆ ಅಮಾನತು ಮಾಡಬಾರದು: ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್, “ಜನಗಣತಿ ಹಾಗೂ ಎಸ್.ಐ.ಆರ್. (SIR) ಸಂದರ್ಭದಲ್ಲಿ ಅಧಿಕಾರಿ ಮತ್ತು ನೌಕರರು ಪ್ರತಿದಿನ 15 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿ ಪಾಲಿಕೆಗೆ ಒಳ್ಳೆಯ ಹೆಸರು ತಂದಿದ್ದಾರೆ. ಸಿಬ್ಬಂದಿ ಕೊರತೆಯ ನಡುವೆಯೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೀರಿ. ನಿಮ್ಮ ಬೇಡಿಕೆಗಳು ನನ್ನ ಗಮನಕ್ಕೆ ಬಂದಿವೆ. ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡಿ. ಸರಿಯಾಗಿ ಪರಿಶೀಲನೆ ಮಾಡದೆ ಯಾರನ್ನೂ ಅಮಾನತು ಮಾಡಬಾರದು ಎಂದು ಸೂಚಿಸುತ್ತೇನೆ. ನೌಕರರು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಪಾಲಿಕೆ ಅಧಿಕಾರಿ ಮತ್ತು ನೌಕರ ಸಿಬ್ಬಂದಿ ಪಾಲ್ಗೊಂಡಿದ್ದರು.

















