ಬೆಂಗಳೂರು, ನ.18 www.bengaluruwire.com:: ಗ್ರಾಮೀಣ ಭಾಗದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆಯಲ್ಲಿನ ವಿಳಂಬವನ್ನು ತಪ್ಪಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ‘ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಇದು ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದು ಬಣ್ಣಿಸಿದರು. ರಾಜ್ಯದಲ್ಲಿ ಒಟ್ಟು 1.50 ಕೋಟಿಗೂ ಅಧಿಕ (1,50,69,090) ಗ್ರಾಮೀಣ ಆಸ್ತಿಗಳಿದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ-11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ-ಬಿ ನೀಡಲಾಗಿದೆ.
ಬಾಕಿ ಉಳಿದಿರುವ 97,59,867 ಆಸ್ತಿಗಳ ಪೈಕಿ ವ್ಯಾಜ್ಯ ರಹಿತ, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಆಸ್ತಿಗಳಿಗೆ 2027ರ ಡಿಸೆಂಬರ್ 31ರೊಳಗೆ ಇ-ಸ್ವತ್ತು ನೀಡಲು ರಾಜ್ಯದ 5,927 ಗ್ರಾಮ ಪಂಚಾಯತಿಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ದಾಖಲೆ ಇಲ್ಲದವರಿಗೂ ಇ-ಸ್ವತ್ತು ಭಾಗ್ಯ: ರಾಜ್ಯದ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯಲು ಎದುರಾಗುತ್ತಿದ್ದ ತೊಡಕುಗಳನ್ನು ನಿವಾರಿಸಲು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ನೇತೃತ್ವದ ಪಂಚ ಸದಸ್ಯರ ಸಮಿತಿಯ ಶಿಫಾರಸಿನಂತೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025’ಕ್ಕೆ ತಿದ್ದುಪಡಿ ತರಲಾಗಿದೆ.

ಪ್ರವಾಹ, ಮಳೆ, ಬೆಂಕಿ ಅನಾಹುತ ಅಥವಾ ಗೆದ್ದಲು ಹಿಡಿದು ಮೂಲ ದಾಖಲೆಗಳು ನಾಶವಾಗಿದ್ದರೆ, ಅಂತಹವರಿಗೆ 07.04.2025ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಸ್ಥಳ ಮಹಜರು ನಡೆಸಿ, 21 ದಿನಗಳ ಆಕ್ಷೇಪಣೆ ಅವಧಿಯ ನಂತರ ಇ-ಸ್ವತ್ತು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಣಮನೆ ಹಾಗೂ ಕಂದಾಯ ಭೂಮಿ ಆಸ್ತಿಗಳಿಗೂ ಅನ್ವಯ:
ಮಲೆನಾಡು ಭಾಗಕ್ಕೆ ವಿಶೇಷ ಆದ್ಯತೆ: ಕೃಷಿ ಜಮೀನಿನಲ್ಲಿ ವಾಸ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿರುವ 4,000 ಚದರಡಿಯವರೆಗಿನ ಕಣಮನೆ ಮತ್ತು ಮನೆದಳ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ ನಿಯಮಾನುಸಾರ ಇ-ಸ್ವತ್ತು ನೀಡಲಾಗುವುದು.
ಕಂದಾಯ ಭೂಮಿ: ಮೊದಲ ಹಂತದಲ್ಲಿ ಭೂಪರಿವರ್ತನೆಯಾದ (Converted) ಬಿ-ಖರಾಬು ರಹಿತ ಸರ್ವೆ ನಂಬರ್ ಸ್ವತ್ತುಗಳಿಗೆ ಇ-ಸ್ವತ್ತು ನೀಡಲಾಗುವುದು. ಮುಂದಿನ ಕೆಲವೇ ತಿಂಗಳುಗಳಲ್ಲಿ ನಿಯಮ ಮಾರ್ಪಾಡು ಮಾಡಿ, ಭೂಪರಿವರ್ತನೆಯಾಗದ (Unconverted) ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಇ-ಸ್ವತ್ತು 3.0 ತಂತ್ರಾಂಶ ಹಾಗೂ ಪ್ರತ್ಯೇಕ ಮೋಜಣಿ ವಿಭಾಗ:
ಸರ್ಕಾರಿ ಮತ್ತು ಬಿ-ಖರಾಬು ಭೂಮಿಗೆ ಅಕ್ರಮವಾಗಿ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದೊಂದಿಗೆ ಸ್ವಯಂಚಾಲಿತವಾಗಿ ಸಂಯೋಜನೆಗೊಳ್ಳುವ ‘ಇ-ಸ್ವತ್ತು 3.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ಆಸ್ತಿಗಳ ಅಳತೆಗಾಗಿ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸಿ, ಸಿಬ್ಬಂದಿಗೆ ತರಬೇತಿ ನೀಡಿ ರೋವರ್‌ಗಳ ಮೂಲಕ ಸರ್ವೆ ನಡೆಸುವ ಪ್ರಸ್ತಾವನೆಯನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತ ವೆಂಕಟರಾಜಾ, ಬೆಳಗಾವಿ ಸಿಇಓ ರಾಹುಲ್ ಶಿಂಧೆ ಹಾಗೂ ಇ-ಆಡಳಿತ ನಿರ್ದೇಶಕ ಗಿರೀಶ್ ದಿಲೀಪ್ ಬದೋಲೆ ಉಪಸ್ಥಿತರಿದ್ದರು.
ಸಾರ್ವಜನಿಕರ ಗಮನಕ್ಕೆ: ಇ-ಸ್ವತ್ತು ಪಡೆಯುವಲ್ಲಿ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ತೊಡಕುಗಳು ಎದುರಾದರೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9483476000 ಗೆ ಸಂಪರ್ಕಿಸಬಹುದು.




















