ಬೆಂಗಳೂರು, ನ.15 www.bengaluruwire.com: ರಾಜ್ಯದ ಪರಿಶಿಷ್ಟ ಪಂಗಡಗಳ (ST) ನಿರುದ್ಯೋಗಿ ಯುವಕ-ಯುವತಿಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ರಾಜ್ಯ ಸರ್ಕಾರ ಅವರ ನೆರವಿಗೆ ಮುಂದಾಗಿದೆ.
ಸ್ವಯಂ-ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್ ಅಥವಾ ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ಗಳನ್ನು ಆರಂಭಿಸಲು ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ ನೀಡುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರ ಪ್ರಯತ್ನದಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ಪರಿಶಿಷ್ಟ ಪಂಗಡಗಳ ಇಲಾಖೆಯ ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಈ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಘಟಕ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ (Subsidy) ದೊರೆಯಲಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.
ಸಚಿವ ಟಿ. ರಘುಮೂರ್ತಿ ಅವರ ವಿಶೇಷ ಪ್ರಯತ್ನ: ಕಳೆದ ಬಜೆಟ್ನಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆಯ ಕುರಿತು ಘೋಷಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಟಿ. ರಘುಮೂರ್ತಿ ಅವರು, ಈ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಲು ವಿಶೇಷ ಗಮನ ಹರಿಸಿದರು.

ಯಾರೆಲ್ಲಾ ಅರ್ಹರು? ಬ್ಯಾಂಕ್ ಸೌಲಭ್ಯ ಹೇಗೆ?: ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಆದಿವಾಸಿಗಳೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಮುದಾಯಗಳಿದ್ದು, ಈ ಎಲ್ಲಾ ಸಮುದಾಯಗಳ ಅರ್ಹ ಯುವಕ-ಯುವತಿಯರಿಗೆ ಈ ಯೋಜನೆ ಅನ್ವಯವಾಗಲಿದೆ. ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಒದಗಿಸಲು ಮತ್ತು ಸರ್ಕಾರದ ಸಹಾಯಧನವನ್ನು ಸಕಾಲಕ್ಕೆ ತಲುಪಿಸಲು ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಎಂ. ಕನಗವಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಅಶೋಕ್ ಡಿ.ಆರ್. ತಿಳಿಸಿದ್ದಾರೆ.
“ಈ ಯೋಜನೆಯಿಂದ ಪರಿಶಿಷ್ಟ ಪಂಗಡ ಸಮುದಾಯದವರ ಆರ್ಥಿಕ ಸಬಲೀಕರಣವಾಗಲಿದೆ. ಅನಿಯಂತ್ರಿತ ಬೀದಿ ಬದಿ ಮಾರಾಟಕ್ಕೆ ಹೋಲಿಸಿದರೆ, ಪ್ರಮಾಣೀಕೃತ ಮೊಬೈಲ್ ಘಟಕಗಳು ಸಾರ್ವಜನಿಕರಿಗೆ ಉತ್ತಮ ಮತ್ತು ಗುಣಮಟ್ಟದ ಆಹಾರ ಒದಗಿಸಲು ಸಹಕಾರಿಯಾಗಲಿವೆ. ಈ ಯೋಜನೆ ಸಾವಿರಾರು ಯುವಕರಿಗೆ ನೆರವಾಗಲಿ, ಆ ಮೂಲಕ ಅವರು ಇನ್ನಷ್ಟು ಮಂದಿಗೆ ಉದ್ಯೋಗ ನೀಡುವಂತಾಗಲಿ ಎಂಬುದೇ ನಮ್ಮ ಆಶಯ.” — ಟಿ. ರಘುಮೂರ್ತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು


















