ಬೆಂಗಳೂರು, ನ.19 www.bengaluruwire.com: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನಾಡಿನ ಪತ್ರಕರ್ತರ ಸಾಂಘಿಕ ಧ್ವನಿಯಾಗಿ, ಪತ್ರಕರ್ತರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಕೆಯುಡಬ್ಲ್ಯೂಜೆಯ ನೂತನವಾಗಿ ಚುನಾಯಿತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಗುರುವಾರ ಬೆಂಗಳೂರಿನ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಚಿವರಾದ ಅಜಯ್ ಸಿಂಗ್ ಮತ್ತು ಬಸವಂತಪ್ಪ ಅವರು ಪಾಲ್ಗೊಂಡು ಮಾತನಾಡಿದರು. “ಸಮಾಜದಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾಡಿನ ಅಭಿವೃದ್ಧಿ ಹಾಗೂ ಜನಪರ ವಿಚಾರಗಳನ್ನು ಸಮಾಜದ ಮುಂದಿಡುವಲ್ಲಿ ಪತ್ರಕರ್ತರ ಕೊಡುಗೆ ಅನನ್ಯವಾದದ್ದು” ಎಂದು ಅಭಿಪ್ರಾಯಪಟ್ಟರು.
ನವೀಕೃತ ವೆಬ್‌ಸೈಟ್ ಅನಾವರಣ: ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಪಿ. ತ್ಯಾಗರಾಜ್, “ಪತ್ರಕರ್ತರ ಶಕ್ತಿಯುತ ಸಂಘಟನೆಯಾಗಿರುವ ಕೆಯುಡಬ್ಲ್ಯೂಜೆ ಸಂಘಟನಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆಯ ನವೀಕೃತ ವೆಬ್‌ಸೈಟ್ ಅನ್ನು ಪಿ. ತ್ಯಾಗರಾಜ್ ಅವರು ಲೋಕಾರ್ಪಣೆಗೊಳಿಸಿದರು. ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.


ದತ್ತಿನಿಧಿಗೆ 1 ಲಕ್ಷ ರೂ. ದೇಣಿಗೆ ಹಸ್ತಾಂತರ: ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಅವರು ಹಿರಿಯ ಪತ್ರಕರ್ತ ದಿವಂಗತ ಶ್ರೀಧರ್ ಆಚಾರ್ ಅವರ ಹೆಸರಿನಲ್ಲಿ ಕೆಯುಡಬ್ಲ್ಯೂಜೆ ದತ್ತಿನಿಧಿ ಸ್ಥಾಪಿಸಲು ಒಂದು ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು. ಕೆಯುಡಬ್ಲ್ಯೂಜೆ ಶಿಸ್ತುಬದ್ಧ ಹಾಗೂ ವೃತ್ತಿಪರ ಚಟುವಟಿಕೆಗಳ ಮೂಲಕ ಪತ್ರಕರ್ತರ ಸಂಘಟನೆಯಾಗಿ ಮಾದರಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಅನಂತ ಚಿನಿವಾರ ಅವರಿಗೆ ದತ್ತಿನಿಧಿ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ತಂಡ ಪತ್ರಕರ್ತರಿಗಾಗಿ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (IFWJ) ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಹಾಗೂ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ರವಿಕುಮಾರ್ ಟೆಲೆಕ್ಸ್ ಅವರುಗಳು ಮಾತನಾಡಿ, ಕೆಯುಡಬ್ಲ್ಯೂಜೆ ನಡೆದು ಬಂದಿರುವ ಹಾದಿಯನ್ನು ಮೆಲುಕು ಹಾಕಿದರು. ಸಂಘಟನೆಯ ಘನತೆಯ ಜೊತೆಗೆ ಪತ್ರಕರ್ತರ ಸಮುದಾಯದ ಬಗ್ಗೆ ಸದಾ ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿದೆ ಎಂದು ತಿಳಿಸಿದರು.
ಕೆಯುಡಬ್ಲ್ಯೂಜೆ ನೂತನ ವೆಬ್‌ಸೈಟ್ ಸಿದ್ಧಪಡಿಸಿದ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ರಮಾಕಾಂತ ಗುಗ್ರಿ, ಶ್ಯಾಮ್ ಹೆಬ್ಬಾರ್ ಎಸ್. ಹಾಗೂ ರವಿಕಾಂತ ಕುಂದಾಪುರ ಅವರಿಗೆ ಸಭೆಯಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಹಿರಿಯ-ಕಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


















