ಬೆಂಗಳೂರು, ಅ.18 www.bengaluruwire.com: ರಾಜ್ಯದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪ್ರಮುಖ ನಿರ್ಧಾರ ಕೈಗೊಂಡಿದೆ.
‘ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026’ ಜಾರಿಗೆ ತಂದಿದ್ದು, ಸೇವೆ ನೀಡಲು ವಿಳಂಬ ಮಾಡುವ ಅಧಿಕಾರಿಗಳಿಗೆ ವಿಧಿಸುವ ಪರಿಹಾರ ವೆಚ್ಚ ಹಾಗೂ ಸುಳ್ಳು ದೂರು ನೀಡುವ ನಾಗರಿಕರ ದಂಡದ ಮೊತ್ತವನ್ನು ಪರಿಷ್ಕರಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಜೇಬಿಗೆ ಕತ್ತರಿ:
ಸಾರ್ವಜನಿಕರಿಗೆ ನಿಗದಿತ ಸಮಯದೊಳಗೆ ಸೇವೆಗಳನ್ನು ಒದಗಿಸಲು ಅಥವಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ವಿಫಲರಾಗುವ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಂದಲೇ ಈ ಪರಿಹಾರ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ. ಅಲ್ಲದೆ, ಸೇವೆಯಲ್ಲಿ ಲೋಪದೋಷಗಳಿದ್ದರೆ ಅಥವಾ ಸೂಕ್ತ ಕಾರಣವಿಲ್ಲದೆ ಅರ್ಜಿಗಳನ್ನು ತಪ್ಪಾಗಿ ತಿರಸ್ಕರಿಸಿದರೆ ಸಂಬಂಧಪಟ್ಟ ಅಧಿಕಾರಿಯಿಂದ ಗರಿಷ್ಠ ಒಂದು ಸಾವಿರದ ಐನೂರು ರೂಪಾಯಿ ಪರಿಹಾರವನ್ನು ವಸೂಲಿ ಮಾಡಿ ನಾಗರಿಕರಿಗೆ ನೀಡಲಾಗುತ್ತದೆ.

ವಿಳಂಬದ ಅವಧಿಗೆ ಅನುಗುಣವಾಗಿ ಪರಿಷ್ಕೃತ ದಂಡದ ವಿವರ:
ಅಧಿಕಾರಿಗಳು ಮಾಡುವ ವಿಳಂಬದ ದಿನಗಳ ಆಧಾರದ ಮೇಲೆ ದಂಡದ ಮೊತ್ತವನ್ನು ಹಂತ-ಹಂತವಾಗಿ ನಿಗದಿಪಡಿಸಲಾಗಿದೆ. ಮೊದಲ ಒಂದು ದಿನದಿಂದ ಐದು ದಿನಗಳ ವಿಳಂಬಕ್ಕೆ ದಿನಕ್ಕೆ ಇಪ್ಪತ್ತು ರೂಪಾಯಿಯಂತೆ ಗರಿಷ್ಠ ಒಂದು ನೂರು ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಆರು ದಿನಗಳಿಂದ ಹತ್ತು ದಿನಗಳ ವಿಳಂಬಕ್ಕೆ ದಿನಕ್ಕೆ ನಲವತ್ತು ರೂಪಾಯಿಯಂತೆ ಗರಿಷ್ಠ ಮುನ್ನೂರು ರೂಪಾಯಿ ಹಾಗೂ ಹನ್ನೊಂದು ದಿನಗಳಿಂದ ಹದಿನೈದು ದಿನಗಳ ವಿಳಂಬಕ್ಕೆ ದಿನಕ್ಕೆ ಅರವತ್ತು ರೂಪಾಯಿಯಂತೆ ಗರಿಷ್ಠ ಆರು ನೂರು ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ.
ಅದೇ ರೀತಿ, ಹದಿನಾರು ದಿನಗಳಿಂದ ಇಪ್ಪತ್ತು ದಿನಗಳ ವಿಳಂಬಕ್ಕೆ ದಿನಕ್ಕೆ ಎಂಭತ್ತು ರೂಪಾಯಿಯಂತೆ ಗರಿಷ್ಠ ಒಂದು ಸಾವಿರ ರೂಪಾಯಿ ಹಾಗೂ ಇಪ್ಪತ್ತೊಂದು ದಿನಗಳಿಂದ ಇಪ್ಪತ್ತೈದು ದಿನಗಳ ವಿಳಂಬಕ್ಕೆ ದಿನಕ್ಕೆ ಒಂದು ನೂರು ರೂಪಾಯಿಯಂತೆ ಒಟ್ಟಾರೆಯಾಗಿ ಗರಿಷ್ಠ ಒಂದು ಸಾವಿರದ ಐನೂರು ರೂಪಾಯಿ ಪರಿಹಾರ ವೆಚ್ಚವನ್ನು ಅಧಿಕಾರಿಗಳಿಂದ ವಸೂಲಿ ಮಾಡಲಾಗುತ್ತದೆ.
ಹುಸಿ ದೂರು ನೀಡುವ ನಾಗರಿಕರಿಗೂ ಕಾದಿದೆ ದಂಡದ ಬಿಸಿ:
ಕೇವಲ ಅಧಿಕಾರಿಗಳಿಗಷ್ಟೇ ಅಲ್ಲದೆ, ಸರ್ಕಾರಿ ನೌಕರರಿಗೆ ಕಿರುಕುಳ ನೀಡುವ, ಬೆದರಿಸುವ ಅಥವಾ ದುರುದ್ದೇಶದಿಂದ ಸುಳ್ಳು ಕುಂದುಕೊರತೆ ದೂರುಗಳನ್ನು ಸಲ್ಲಿಸುವ ನಾಗರಿಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ತನಿಖೆಯ ವೇಳೆ ನಾಗರಿಕರು ನೀಡಿರುವ ದೂರು ದುರುದ್ದೇಶಪೂರಿತ ಎಂದು ಸಾಬೀತಾದರೆ, ಅಂತಹ ವ್ಯಕ್ತಿಗೆ ಪ್ರತಿ ಅರ್ಜಿಗೆ ಒಂದು ಸಾವಿರದ ಐನೂರು ರೂಪಾಯಿ ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಮತ್ತೆ ಪುನರಾವರ್ತಿಸಿದರೆ ಪ್ರತಿ ಅರ್ಜಿಗೆ ಮತ್ತೆ ಒಂದು ಸಾವಿರದ ಐನೂರು ರೂಪಾಯಿ ದಂಡ ಬೀಳಲಿದೆ. ಸಂಬಂಧಪಟ್ಟ ನಾಗರಿಕರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಸೂಕ್ತ ಅವಕಾಶ ನೀಡಿದ ನಂತರವೇ ಈ ದಂಡದ ಆದೇಶ ಹೊರಡಿಸಲಾಗುತ್ತದೆ. ವಿಶೇಷವೆಂದರೆ, ಈ ದಂಡದ ಮೊತ್ತವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುತ್ತದೆ.
ಸಾರ್ವಜನಿಕ ಸೇವೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದೇ ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















