ಬೆಂಗಳೂರು, ಆ.28 www.bengaluruwire.com: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ (ದಕ್ಷಿಣ ವಲಯ) ವಿಭಾಗವು ರೆಸ್ಟೋರೆಂಟ್ ಅಸೋಸಿಯೇಷನ್ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಸಂವಾದ ಸಭೆ ನಡೆಸಿದ್ದು, ಜಿಎಸ್‌ಟಿ ನಿಯಮಗಳ ಪಾಲನೆ ಹಾಗೂ ತಂತ್ರಜ್ಞಾನಾಧಾರಿತ ಪಾರದರ್ಶಕ ಜಾರಿ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದೆ.
ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರ (ಜಾರಿ, ದಕ್ಷಿಣ ವಲಯ) ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉಪ ಆಯುಕ್ತರು ಹಾಗೂ ಹಿರಿಯ ಜಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಯಾದೃಚ್ಛಿಕ ತಪಾಸಣೆಗೆ ಬ್ರೇಕ್, ರಿಸ್ಕ್ ಆಧಾರಿತ ಪರಿಶೀಲನೆ:
ಸಂವಾದದಲ್ಲಿ ಮಾತನಾಡಿದ ಅಧಿಕಾರಿಗಳು, ಜಾರಿ ವಿಭಾಗವು ತಪಾಸಣೆಗೆ ಪ್ರಕರಣಗಳನ್ನು ಅಧಿಕಾರಿಗಳ ವೈಯಕ್ತಿಕ ವಿವೇಚನೆ ಅಥವಾ ಯಾದೃಚ್ಛಿಕವಾಗಿ ಆಯ್ಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತೆರಿಗೆದಾರರ ವಹಿವಾಟು ಮತ್ತು ರಿಟರ್ನ್ಸ್ ಸಲ್ಲಿಕೆಯ ದತ್ತಾಂಶಗಳನ್ನು ವಿಶ್ಲೇಷಿಸಿ, ಪ್ರಕರಣಗಳ ತೀವ್ರತೆಯ ಸೂಚ್ಯಂಕದ (Risk-based) ಆಧಾರದ ಮೇಲೆ ‘ಹೆಚ್ಚಿನ, ಮಧ್ಯಮ ಮತ್ತು ಕಡಿಮೆ’ ತೀವ್ರತೆಯ ವರ್ಗಗಳಾಗಿ ವಿಂಗಡಿಸಿ ಪರಿಶೀಲನೆಗೆ ಗುರುತಿಸಲಾಗುತ್ತದೆ. ಕೇವಲ ದತ್ತಾಂಶ ಹೊಂದಾಣಿಕೆಯಾಗದ ಕಾರಣಕ್ಕೆ ತೆರಿಗೆ ವಂಚನೆ ಎಂದು ಪರಿಗಣಿಸದೆ, ವರ್ತಕರಿಗೆ ಸೂಕ್ತ ದಾಖಲೆಗಳ ಮೂಲಕ ವಿವರಣೆ ನೀಡಲು ಪೂರ್ಣಾವಕಾಶ ನೀಡಲಾಗುತ್ತದೆ.

ಅಧಿಕಾರಿಗಳಿಗೂ ಸಿಸ್ಟಮ್ ಮೂಲಕವೇ ಕೇಸ್ ಹಂಚಿಕೆ:
ಪಾರದರ್ಶಕತೆಯನ್ನು ಕಾಪಾಡಲು ಮತ್ತು ಅಧಿಕಾರಿಗಳ ವೈಯಕ್ತಿಕ ಪೂರ್ವಾಗ್ರಹವನ್ನು ತಡೆಯಲು, ಗುರುತಿಸಲಾದ ಪ್ರಕರಣಗಳನ್ನು ಕಂಪ್ಯೂಟರ್ ವ್ಯವಸ್ಥೆಯ ಮೂಲಕವೇ ಅಧಿಕಾರಿಗಳಿಗೆ ಯಾದೃಚ್ಛಿಕವಾಗಿ (Randomized allocation) ಹಂಚಿಕೆ ಮಾಡಲಾಗುತ್ತದೆ. ಇದರಿಂದ ಯಾವುದೇ ಅಧಿಕಾರಿಯು ತಮಗೆ ಬೇಕಾದ ತೆರಿಗೆದಾರರನ್ನು ತಪಾಸಣೆಗೆ ಸ್ವತಃ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಜಿಎಸ್‌ಟಿ ಪೋರ್ಟಲ್ ರೆಫರೆನ್ಸ್ ಇಲ್ಲದ ನೋಟಿಸ್ ಸ್ವೀಕರಿಸಬೇಡಿ:
ಇಲಾಖೆಯು ಪಾರದರ್ಶಕತೆಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ತಪಾಸಣಾ ಅಧಿಕೃತ ಆದೇಶಗಳು, ಕಾರಣ ಕೇಳುವ ನೋಟಿಸ್‌ಗಳು (SCN), ಹಿಂಬರಹಗಳು ಹಾಗೂ ಅಂತಿಮ ಆದೇಶಗಳನ್ನು ನೇರವಾಗಿ ‘ಜಿಎಸ್‌ಟಿ ಕಾಮನ್ ಪೋರ್ಟಲ್’ ಮೂಲಕವೇ ಹೊರಡಿಸಲಾಗುತ್ತದೆ ಮತ್ತು ನೋಂದಾಯಿತ ಇ-ಮೇಲ್‌ಗೆ ರವಾನಿಸಲಾಗುತ್ತದೆ.
ಮಾನ್ಯವಾದ ಸಿಸ್ಟಮ್-ಜನರೇಟೆಡ್ ರೆಫರೆನ್ಸ್ ಸಂಖ್ಯೆ (Reference Number) ಇಲ್ಲದ ಯಾವುದೇ ಭೌತಿಕ ನೋಟಿಸ್ ಅಥವಾ ಸಂವಹನವನ್ನು ಸ್ವೀಕರಿಸಬಾರದು ಹಾಗೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕು ಎಂದು ಎಚ್ಚರಿಸಲಾಗಿದೆ.
ಸರಿಯಾದ ತೆರಿಗೆ ಬಿಲ್ (Tax Invoice) ನೀಡುವುದು, ನಿಖರ ವಹಿವಾಟು ಘೋಷಣೆ ಮತ್ತು ಸಕಾಲಿಕ ರಿಟರ್ನ್ಸ್ ಸಲ್ಲಿಕೆಗೆ ಅಸೋಸಿಯೇಷನ್ ತನ್ನ ಸದಸ್ಯರಿಗೆ ಪ್ರೋತ್ಸಾಹಿಸಬೇಕೆಂದು ಇಲಾಖೆ ಕೋರಿತು. ಇಲಾಖೆಯ ಈ ಪಾರದರ್ಶಕ ಹೆಜ್ಜೆಯನ್ನು ಶ್ಲಾಘಿಸಿದ ರೆಸ್ಟೋರೆಂಟ್ ಅಸೋಸಿಯೇಷನ್ ಸದಸ್ಯರು, ನಿಯಮ ಬದಲಾವಣೆಗಳ ಕುರಿತು ಕಾಲಕಾಲಕ್ಕೆ ಇಂತಹ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿ ಮಾಡಿದರು.

















