ಬೆಂಗಳೂರು, ಆ.29 www.bengaluruwire.com: ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಪ್ರಯಾಣಿಸುವ ನಾಗರಿಕರೇ ಗಮನಿಸಿ.
ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ಓಪನ್ ವೆಬ್ ಗರ್ಡರ್‌ನಲ್ಲಿ (OWG) ನಿಗದಿತ ತಾಂತ್ರಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಇಳಿಸಲಾಗಿದೆ.
ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಪರಿಣತ ತಜ್ಞರ ತಂಡವು ಗರ್ಡರ್‌ನ ನಿಯತಕಾಲಿಕ ತಪಾಸಣೆ ಹಾಗೂ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ಗಂಟೆಗೆ 65 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲುಗಳನ್ನು ಸದ್ಯ ಗರಿಷ್ಠ 40 ಕಿ.ಮೀ. ವೇಗದಲ್ಲಿ ಚಲಾಯಿಸಲಾಗುತ್ತಿದೆ. ರೈಲ್ವೆ ಕಾರ್ಯಾಚರಣೆಯ ನಿಯಮಾವಳಿಗಳ ಪ್ರಕಾರ ನಿರ್ವಹಣಾ ಅವಧಿಯಲ್ಲಿ ವೇಗ ನಿರ್ಬಂಧ ವಿಧಿಸುವುದು ಒಂದು ಪ್ರಮಾಣಿತ ಸುರಕ್ಷತಾ ಕ್ರಮವಾಗಿದೆ.
ಪ್ರಯಾಣಿಕರ ಗಮನಕ್ಕೆ:

ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಎಂದಿನಂತೆ ಮುಂದುವರಿದಿದ್ದು, ಒಟ್ಟಾರೆ ಪ್ರಯಾಣದ ಸಮಯದಲ್ಲಿ ಕೇವಲ ಅಲ್ಪ ಪ್ರಮಾಣದ ವ್ಯತ್ಯಾಸ ಅಥವಾ ತಡವಾಗಬಹುದು. ಈ ತಾಂತ್ರಿಕ ನಿರ್ವಹಣಾ ಕಾರ್ಯವು 2026ರ ಅಕ್ಟೋಬರ್ ಎರಡನೇ ವಾರದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾಮಗಾರಿ ಮುಕ್ತಾಯಗೊಂಡ ಬಳಿಕ ತಾಂತ್ರಿಕ ಮೌಲ್ಯಮಾಪನ ನಡೆಸಿ ವೇಗದ ಮಿತಿಯನ್ನು ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ಪಷ್ಟಪಡಿಸಿದೆ.
ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಖಚಿತಪಡಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.




















