ಬೆಂಗಳೂರು, ಆ.28 www.bengaluruwire.com: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಪಿಂಗ್ ತಾಣಗಳಲ್ಲಿ ಒಂದಾದ ಕೋರಮಂಗಲದ ನೆಕ್ಸಸ್ ಮಾಲ್‌ಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.
ಮಾಲ್‌ನ ಫುಡ್ ಕೋರ್ಟ್‌ನಲ್ಲಿರುವ ಪ್ರಸಿದ್ಧ ಆಹಾರ ಮಳಿಗೆಗಳಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಗಾಳಿಗೆ ತೂರಿರುವುದು ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಪಾಲಿಕೆ ತಪಾಸಣೆ ವೇಳೆ ಬಯಲಾಗಿದ್ದು, ಒಟ್ಟು 10 ಮಳಿಗೆಗಳಿಗೆ ₹85,000 ದಂಡ ವಿಧಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೋರಮಂಗಲ ನೆಕ್ಸಸ್ ಮಾಲ್‌ನಲ್ಲಿ ಇಂದು (ಆ. 28) ಅಧಿಕಾರಿಗಳ ತಂಡ ದಿಢೀರ್ ತಪಾಸಣೆ ನಡೆಸಿತು.
ಹಸಿ-ಒಣ ಕಸ ಮಿಶ್ರಣ, ನಿಷೇಧಿತ ಪ್ಲಾಸ್ಟಿಕ್ ಪತ್ತೆ:

ಮಾಲ್‌ನ ಫುಡ್ ಕೋರ್ಟ್ ಮಳಿಗೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೆ ಒಟ್ಟಿಗೆ ಮಿಶ್ರಣ ಮಾಡಿರುವುದು ಕಂಡುಬಂದಿದೆ. ಇದರ ಜೊತೆಗೆ ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿರುವ ಏಕಬಳಕೆಯ ಪ್ಲಾಸ್ಟಿಕ್ (Single-Use Plastic) ಉತ್ಪನ್ನಗಳನ್ನು ರಾಜಾರೋಷವಾಗಿ ಬಳಸಲಾಗುತ್ತಿತ್ತು. ನಿಯಮ ಉಲ್ಲಂಘಿಸಿದ 10 ಬ್ರ್ಯಾಂಡೆಡ್ ಮಳಿಗೆಗಳಿಗೆ ಸ್ಥಳದಲ್ಲೇ ನೋಟಿಸ್ ಜಾರಿಗೊಳಿಸಿ ದಂಡ ವಸೂಲಿ ಮಾಡಲಾಗಿದೆ.
ಯಾವ್ಯಾವ ಮಳಿಗೆಗೆ ಎಷ್ಟೆಷ್ಟು ದಂಡ?
ಚಸ್ಕಾ ಬನ್: ₹25,000
ಮೆಕ್‌ಡೊನಾಲ್ಡ್ಸ್: ₹10,000
ಬರ್ಗರ್ ಕಿಂಗ್: ₹10,000
ಫಿಶ್ ಅಂಡ್ ಚಿಪ್ಸ್: ₹10,000
ಪೊಪೈಸ್: ₹5,000
ಗುಡ್ ಫ್ಲಿಪ್ಪಿನ್ ಬರ್ಗರ್: ₹5,000
ವಾವ್ ವಾವ್ ಚೈನಾ: ₹5,000
ನಾಗಾಸ್: ₹5,000
ಕೆಎಫ್‌ಸಿ (KFC): ₹5,000
ಶಿವಸಾಗರ್: ₹5,000
ಕಠಿಣ ಕಾನೂನು ಕ್ರಮದ ಎಚ್ಚರಿಕೆ:
”ನಗರದಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳು ಹಾಗೂ ಮಾಲ್ ಮಳಿಗೆಗಳು ಕಡ್ಡಾಯವಾಗಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ಪರಿಸರಕ್ಕೆ ಮಾರಕವಾದ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು” ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ದಿಢೀರ್ ದಾಳಿ ಹಾಗೂ ಕಾರ್ಯಾಚರಣೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AGM) ಶಶಿಕಲಾ, ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು ಭಾಗವಹಿಸಿದ್ದರು.




















