ಬೆಂಗಳೂರು, ಆ.25 www.bengaluruwire.com: ಜೀವ ಉಳಿಸಬೇಕಾದ ವೈದ್ಯಕೀಯ ಸಂಸ್ಥೆಯೇ ಸಾರ್ವಜನಿಕರ ಜೀವಕ್ಕೆ ಕಂಟಕ ತಂದಿಟ್ಟ ಬೇಜವಾಬ್ದಾರಿ ಕೃತ್ಯವೊಂದು ಸಿಲಿಕಾನ್ ಸಿಟಿಯಲ್ಲಿ ಬಯಲಾಗಿದೆ.
ರಸ್ತೆಬದಿಯಲ್ಲೇ ಅಪಾಯಕಾರಿ ಮೆಡಿಕಲ್ ತ್ಯಾಜ್ಯ ಸುರಿದು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಹೆಲ್ತ್ ಕೇರ್ ಸೆಂಟರ್‌ಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಬಿಸಿ ಮುಟ್ಟಿಸಿದ್ದು, ಸ್ಥಳದಲ್ಲೇ ₹40,000 ದಂಡ ವಸೂಲಿ ಮಾಡಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯ 9ನೇ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕರು ಓಡಾಡುವ ಮುಖ್ಯರಸ್ತೆಯಲ್ಲೇ ಬಳಸಿದ ಸಿರಿಂಜ್‌ಗಳು, ಚೂಪಾದ ಸೂಜಿಗಳು, ಪ್ಲಾಸ್ಟರ್‌ಗಳು ಹಾಗೂ ಖಾಲಿ ಮಾತ್ರೆ ಡಬ್ಬಗಳನ್ನು ರಾಶಿ ಹಾಕಲಾಗಿತ್ತು. ಕರ್ತವ್ಯದಲ್ಲಿದ್ದ ಪೌರಕಾರ್ಮಿಕರು ಇದನ್ನು ಗಮನಿಸಿ ತಕ್ಷಣವೇ ಪಾಲಿಕೆ ಮಾರ್ಷಲ್‌ಗಳಿಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಮಾರ್ಷಲ್‌ಗಳು ಕಸದ ರಾಶಿಯನ್ನು ಜಾಲಾಡಿದಾಗ ಹೆಲ್ತ್ ಕೇರ್ ಸೆಂಟರ್‌ನ ಪ್ರಿಸ್ಕ್ರಿಪ್ಷನ್ ಪತ್ರಗಳು ಸಿಕ್ಕಿಬಿದ್ದಿವೆ. ಎಷ್ಟೇ ಜಾಣತನದಿಂದ ಕಸ ಎಸೆದಿದ್ದರೂ ಸ್ಥಳದಲ್ಲೇ ಸಾಕ್ಷಿ ಸಮೇತ ಸಿಕ್ಕಿಬಿದ್ದ ಕ್ಲಿನಿಕ್ ಆಡಳಿತ ಮಂಡಳಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು ತಕ್ಷಣವೇ ಕ್ರಮ ಕೈಗೊಂಡು, ₹40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ಸ್ಥಳದಲ್ಲೇ ವಸೂಲಿ ಮಾಡಿದ್ದಾರೆ.

ಪಾಲಿಕೆ ಖಡಕ್ ಎಚ್ಚರಿಕೆ:
ವೈದ್ಯಕೀಯ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಅಧಿಕೃತ ತ್ಯಾಜ್ಯ ನಿರ್ವಹಣಾ ವಿಧಾನಗಳ ಮೂಲಕವೇ ವಿಲೇವಾರಿ ಮಾಡುವುದು ಕಡ್ಡಾಯ. ಕ್ಲಿನಿಕ್, ಆಸ್ಪತ್ರೆ ಅಥವಾ ಲ್ಯಾಬ್‌ಗಳು ನಿಯಮ ಗಾಳಿಗೆ ತೂರಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿದರೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ಜಡಿಯುವುದರ ಜೊತೆಗೆ ಭಾರಿ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಸಿದ್ದಾರೆ.


















