ನವದೆಹಲಿ/ಬೆಂಗಳೂರು, www.bengaluruwire.com: ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಈರುಳ್ಳಿ ದರ ಗಗನಕ್ಕೇರಿದೆ. ಮಳೆಯ ಅಭಾವ, ಬಿತ್ತನೆ ಪ್ರಮಾಣದಲ್ಲಿ ಕುಸಿತ ಹಾಗೂ ಮಾರುಕಟ್ಟೆಗೆ ಪೂರೈಕೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಪರಿಸ್ಥಿತಿ ಏನಿದೆ?:
ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ ₹17 ರಿಂದ ₹28 ರಷ್ಟಿದ್ದ ಈರುಳ್ಳಿ ದರ, ಪ್ರಸ್ತುತ ₹32 ರಿಂದ ₹35 ಕ್ಕೆ ತಲುಪಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಕೆಜಿಗೆ ₹50 ರಿಂದ ₹55 ಕ್ಕೆ ಮಾರಾಟವಾಗುತ್ತಿದ್ದರೆ, ಉತ್ತಮ ಗುಣಮಟ್ಟದ (ಫಸ್ಟ್ ಗ್ರೇಡ್) ಈರುಳ್ಳಿ ಬೆಲೆ ₹60 ರ ಗಡಿ ದಾಟಿದೆ.
ದೇಶಾದ್ಯಂತ ಶೇ. 59 ರಷ್ಟು ದರ ಏರಿಕೆ:

ಸರ್ಕಾರಿ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಈರುಳ್ಳಿಯ ಸರಾಸರಿ ಚಿಲ್ಲರೆ ದರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 59 ರಷ್ಟು ಹೆಚ್ಚಾಗಿ ₹43.53 ಕ್ಕೆ ತಲುಪಿದೆ. ಸಗಟು ದರದಲ್ಲೂ ಶೇ. 68 ರಷ್ಟು ಏರಿಕೆಯಾಗಿದ್ದು, ಸರಾಸರಿ ₹35.58 ಕ್ಕೆ ಮುಟ್ಟಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು:
* ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು.
* ಹೊಸ ಬೆಳೆಯ ಬಿತ್ತನೆ ತಡವಾಗಿರುವುದು ಮತ್ತು ಉತ್ಪಾದನೆ ಕುಸಿತ.
* ಹಬ್ಬದ ಸೀಸನ್ ಆರಂಭವಾಗಿದ್ದರಿಂದ ಮನೆ ಹಾಗೂ ಹೋಟೆಲ್‌ಗಳಲ್ಲಿ ಹೆಚ್ಚಿದ ಬೇಡಿಕೆ.
* ಎಪಿಎಂಸಿ ಮಾರುಕಟ್ಟೆಗಳಿಗೆ ದಿನಂಪ್ರತಿ ಬರುತ್ತಿರುವ ಆವಕದಲ್ಲಿ ತೀವ್ರ ಇಳಿಕೆ.
ಬೆಲೆ ನಿಯಂತ್ರಣಕ್ಕೆ ‘ಕಾಂದಾ ಎಕ್ಸ್‌ಪ್ರೆಸ್’ ರೈಲುಗಳ ಬಳಕೆ:
ಗಗನಕ್ಕೇರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಂಡಿದೆ. ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಪ್ರಮುಖ ನಗರಗಳಿಗೆ ತ್ವರಿತವಾಗಿ ತಲುಪಿಸಲು ವಿಶೇಷ ಗೂಡ್ಸ್ ರೈಲುಗಳಾದ ‘ಕಾಂದಾ ಎಕ್ಸ್‌ಪ್ರೆಸ್’ (Kanda Express) ಮೂಲಕ ಸರಬರಾಜು ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಪೂರೈಕೆ ಸುಧಾರಿಸದಿದ್ದರೆ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

















