ಬೆಂಗಳೂರು, ಆ.27 www.bengaluruwire.com: ರಾಜ್ಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಉನ್ನತ ಶಿಕ್ಷಣ ಇಲಾಖೆಯು ಈ ಸಮಿತಿಯ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸಲಿದ್ದು, ಸಮಿತಿಯು ಒಂದು ತಿಂಗಳ ಒಳಗಾಗಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ.
ಸಮಿತಿಯ ಸದಸ್ಯರು;
ಯು.ಟಿ. ಖಾದರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು) – ಅಧ್ಯಕ್ಷರು

ಬಸವರಾಜ ರಾಯರೆಡ್ಡಿ (ಉನ್ನತ ಶಿಕ್ಷಣ ಸಚಿವರು) – ಸದಸ್ಯರು
ಪ್ರಿಯಾಂಕ್ ಖರ್ಗೆ (ಗೃಹ, ಐಟಿ-ಬಿಟಿ ಸಚಿವರು) – ಸದಸ್ಯರು
ಡಾ. ಶರಣಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು) – ಸದಸ್ಯರು
ಮಧು ಬಂಗಾರಪ್ಪ (ಶಾಲಾ ಶಿಕ್ಷಣ ಸಚಿವರು) – ಸದಸ್ಯರು
ಸಮಿತಿಯ ಪ್ರಮುಖ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಗಳು
ಪರೀಕ್ಷಾ ಅಕ್ರಮ ತಡೆ: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವುದು, ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ನಿಗದಿತ ಪರೀಕ್ಷಾ ಮತ್ತು ನೇಮಕಾತಿ ವೇಳಾಪಟ್ಟಿ ರೂಪಿಸುವುದು.
ಶುಲ್ಕ ಹಾಗೂ ಕೋಚಿಂಗ್ ಸೆಂಟರ್ ನಿಯಂತ್ರಣ: ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ನಿಯಂತ್ರಣ ಮತ್ತು ಕೋಚಿಂಗ್ ಸೆಂಟರ್‌ಗಳ ಕಾರ್ಯವೈಖರಿ ಮೇಲೆ ನಿಗಾ ಇಡುವುದು.
ಮೂಲಸೌಕರ್ಯ ವೃದ್ಧಿ: ಸರ್ಕಾರಿ ಶಾಲೆ, ಪಿಯು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಹಾಗೂ ವಸತಿ ನಿಲಯಗಳ ಸೌಲಭ್ಯ ಕಲ್ಪಿಸುವುದು.
ಕೌಶಲ್ಯ ಮತ್ತು ಉದ್ಯೋಗಾವಕಾಶ: ಮಾರುಕಟ್ಟೆ ಅಗತ್ಯತೆಗಳಿಗೆ ತಕ್ಕಂತೆ ಪಠ್ಯಕ್ರಮ ನವೀಕರಣ, ಇಂಟರ್ನ್‌ಶಿಪ್‌ಗಳು ಹಾಗೂ ಉದ್ಯಮ-ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಬಲಪಡಿಸುವುದು.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಪರೀಕ್ಷಾ ಒತ್ತಡ ನಿರ್ವಹಣೆ, ಕೌನ್ಸಿಲಿಂಗ್ ವ್ಯವಸ್ಥೆ ಹಾಗೂ ಆತ್ಮಹತ್ಯೆ ತಡೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು.
ಶಿಕ್ಷಣದಲ್ಲಿ ಸಮಾನತೆ: ಎಸ್‌ಸಿ/ಎಸ್‌ಟಿ, ಒಬಿಸಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ವಿಸ್ತರಿಸುವುದು.
ಈ ಸಮಿತಿಯು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರ ಜೊತೆ ವಿಸ್ತೃತ ಸಮಾಲೋಚನೆ ನಡೆಸಿ ಅಂತಿಮ ವರದಿ ನೀಡಲಿದೆ.



















