ಬೆಂಗಳೂರು, ಆ.24 www.bengaluruwire.com: ಕರ್ನಾಟಕದಲ್ಲಿ ಸ್ಪೆಷಲ್ ಇಂಟೆನ್ಸಿವ್ ರಿವಿಷನ್ (ಎಸ್‌ಐಆರ್) ಪ್ರಕ್ರಿಯೆಯ ನಂತರ ಚುನಾವಣಾ ಆಯೋಗ ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.
ಈ ಪಟ್ಟಿಯಲ್ಲಿ 4.46 ಕೋಟಿಗೂ ಹೆಚ್ಚು ಮತದಾರರು ಇದ್ದು, 1,07,96,339 ಮತದಾರರನ್ನು (ಶೇ. 19.48) ಗೈರುಹಾಜರಿ, ಸ್ಥಳಾಂತರಗೊಂಡವರು, ಸತ್ತವರು, ನಕಲುದಾರರು ಮತ್ತು ಇತರರು (ಎಎಸ್‌ಡಿಡಿಒ) ಎಂದು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿ. ಅನ್ಬುಕ್‌ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅನ್ಬುಕ್‌ಕುಮಾರ್ ಅವರು, “ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸುತ್ತಿರುವುದರಿಂದ 4,46,35,975 ಮತದಾರರ ಹೆಸರುಗಳನ್ನು ಸೇರಿಸಲಾಗುವುದು” ಎಂದು ಹೇಳಿದರು. ಇವರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು ಮತ್ತು 2,871 ಇತರೆ ವರ್ಗದವರಿದ್ದಾರೆ. ಸೇವಾ ಮತದಾರರು 44,186 ಮಂದಿ ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 4,46,80,151 ಆಗಿದೆ.
ಎಎಸ್‌ಡಿಡಿಒ ವರ್ಗೀಕರಣ ಹೀಗಿದೆ:

– ಗೈರುಹಾಜರಿ: 15,17,042 (ಶೇ. 2.74)
– ಶಾಶ್ವತ ಸ್ಥಳಾಂತರ: 65,45,679 (ಶೇ. 11.81)
– ಮೃತರು: 16,39,864 (ಶೇ. 2.96)
– ನಕಲು/ಈಗಾಗಲೇ ನೋಂದಣಿ: 7,09,870 (ಶೇ. 1.28)
– ಇತರೆ: 3,83,884 (ಶೇ. 0.69)
ಗ್ರೇಟರ್ ಬೆಂಗಳೂರು ಪ್ರಾಧಿಕಾರ/ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 1,03,88,363 ಮತದಾರರಿದ್ದು, ಅದರಲ್ಲಿ 46,82,703 ಮಂದಿ ಎಎಸ್‌ಡಿಡಿಒ ಪಟ್ಟಿಯಲ್ಲಿದ್ದಾರೆ. ಜೂನ್ 16ರ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5,54,32,314 ಇತ್ತು. ಎಸ್‌ಐಆರ್ ಭಾಗವಾಗಿ ಜೂನ್ 30ರಿಂದ ಆಗಸ್ಟ್ 17ರವರೆಗೆ ಮನೆ-ಮನೆ ಪರಿಶೀಲನೆ ನಡೆಸಲಾಗಿದೆ.
18-19 ವರ್ಷ ವಯಸ್ಸಿನ ಮತದಾರರು 3,70,341, ಅಂಗವಿಕಲ ಮತದಾರರು 5,55,691, ಅನಿವಾಸಿ ಭಾರತೀಯರು 951 ಮತ್ತು ಸೇವಾ ಮತದಾರರು 44,176 ಇದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟವರು ಸುಮಾರು 3,92,302 ಮಂದಿ. ಸ್ವಯಂ-ಮ್ಯಾಪಿಂಗ್ ಪೂರ್ಣಗೊಳಿಸಿದವರು 1,75,92,567 (ಶೇ. 39.42), ಸಂತತಿ ಮ್ಯಾಪಿಂಗ್ 2,46,92,908 (ಶೇ. 55.32) ಮತ್ತು ಯಾವುದೇ ಮ್ಯಾಪಿಂಗ್ ಮಾಹಿತಿ ನೀಡದವರು 23,45,500 ಇದ್ದಾರೆ.
ಮತಗಟ್ಟೆಗಳಲ್ಲಿ 1,200ಕ್ಕಿಂತ ಹೆಚ್ಚು ಮತದಾರರು ಇರಬಾರದು ಎಂಬ ನಿರ್ದೇಶನದಂತೆ 1,873 ಹೊಸ ಮತಗಟ್ಟೆಗಳನ್ನು ಸೇರಿಸಲಾಗಿದೆ. ಒಟ್ಟು ಮತದಾನ ಕೇಂದ್ರಗಳು ಈಗ 60,923 ಆಗಿವೆ (ಹಿಂದೆ 59,050).
ಇಲ್ಲಿಯವರೆಗೆ 4,73,354 ಫಾರ್ಮ್ 6, 3,880 ಫಾರ್ಮ್ 6ಎ, ಸುಮಾರು 67,000 ಫಾರ್ಮ್ 7 ಮತ್ತು 9,23,000 ಫಾರ್ಮ್ 8 ಅರ್ಜಿಗಳು ಸೇರಿ ಒಟ್ಟು 14,67,920 ಫಾರ್ಮ್‌ಗಳು ಬಂದಿವೆ. ಹೆಸರಿನಲ್ಲಿ ದೋಷವಿರುವ 20.35 ಲಕ್ಷ ಮತ್ತು ಮ್ಯಾಪಿಂಗ್ ಮಾಹಿತಿ ನೀಡದ 23.45 ಲಕ್ಷ ಸೇರಿ ಒಟ್ಟು 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿ ಅಕ್ಟೋಬರ್ 22ರೊಳಗೆ ಪೂರ್ಣಗೊಳ್ಳಲಿದೆ.
ಬಿಬಿಎಂಪಿ ಕೇಂದ್ರದಲ್ಲಿ ಸುಮಾರು 4.29 ಲಕ್ಷ, ಬಿಬಿಎಂಪಿ ಉತ್ತರದಲ್ಲಿ 6.13 ಲಕ್ಷ, ಬೆಂಗಳೂರು ನಗರದಲ್ಲಿ 9.46 ಲಕ್ಷ ಮತ್ತು ಬಿಬಿಎಂಪಿ ದಕ್ಷಿಣದಲ್ಲಿ 4.17 ಲಕ್ಷ ನೋಟಿಸ್‌ಗಳಿವೆ. ಕಲಬುರಗಿ, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲೂ ಹೆಚ್ಚು ನೋಟಿಸ್‌ಗಳು ಇವೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಅವಧಿ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಇರುತ್ತದೆ. ಸೂಚನೆ ಮತ್ತು ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 22ರವರೆಗೆ ಮುಂದುವರಿಯುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026ರಂದು ಪ್ರಕಟಿಸಲಾಗುವುದು. ಹೆಸರು, ಜನ್ಮದಿನಾಂಕ ಅಥವಾ ನಿವಾಸ ಸ್ಥಳಾಂತರ ತಿದ್ದುಪಡಿಗೆ ಫಾರ್ಮ್ 8 ಸಲ್ಲಿಸಬಹುದು ಎಂದು ಸಿಇಒ ಅನ್ಬುಕ್‌ಕುಮಾರ್ ತಿಳಿಸಿದ್ದಾರೆ.
ಎಲ್ಲಾ ನಾಗರೀಕರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ಕರಡು ಮತದಾರರ ಪಟ್ಟಿಯು https://www.ceo.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಬೆಂಗಳೂರಿನಲ್ಲಿ 54.18% ಅರ್ಹ ಮತದಾರರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಸಲಾದ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯವು ಜೂನ್ 16 ರಂದು ಜಿಲ್ಲಾ ಚುನಾವಣಾ ಅಧಿಕಾರಿ (DEO) ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತರಾದ ಎಂ ಮಹೇಶ್ವರ ರಾವ್ ಅವರು, ಪ್ರಕಟಿಸಿದ 1,03,88,363 ಮತದಾರರ ಪೈಕಿ ಕೇವಲ 56,99,660 (54.87%) ಅರ್ಹ ಮತದಾರರೆಂದು ಗುರುತಿಸಿದೆ.
ಸೋಮವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು, (46,88,703) 45.13% ಮತದಾರರನ್ನು ಗೈರುಹಾಜರಿ, ಸ್ಥಳಾಂತರಗೊಂಡ, ಸತ್ತ, ನಕಲು (ASDD) ವರ್ಗದ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಈ ಹಿಂದೆ ಏಪ್ರಿಲ್ 18 ರಂದು ಜಿಬಿಎ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದಾಗ, ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿರುವ ಐದು ನಗರ ನಿಗಮಗಳ ವಾರ್ಡ್-ವಾರು ಮತದಾರರ ಪಟ್ಟಿಯಲ್ಲಿ 88,95,361 ಮತದಾರರಿದ್ದರು, ಆದಾಗ್ಯೂ, SIR ಪ್ರಾರಂಭವಾದ ನಂತರ, ಪಟ್ಟಿಯನ್ನು ಬಳಕೆಯಲ್ಲಿಲ್ಲ ಎಂದು ಪರಿಗಣಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ–2026 ರ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, “ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ 27,69,866 ಪುರುಷ ಮತದಾರರು, 29,29,092 ಮಹಿಳಾ ಮತದಾರರು ಮತ್ತು 702 ಇತರ ಮತ್ತು ಟ್ರಾನ್ಸ್‌ಜೆಂಡರ್ ಮತದಾರರು ಇದ್ದಾರೆ, ಒಟ್ಟು ಮತದಾರರ ಸಂಖ್ಯೆ 56,99,660 ಕ್ಕೆ ತಲುಪಿದೆ” ಎಂದು ಹೇಳಿದರು.
















