ಬೆಂಗಳೂರು, ಆ.26 www.bengaluruwire.com: ದೇವನಹಳ್ಳಿ ತಾಲ್ಲೂಕಿನ ಕುಂದಾಣ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಪ್ರಸಿದ್ಧ ಮಶೀನ್ ಟೂಲ್ಸ್ ತಯಾರಿಕಾ ಕಂಪನಿ ‘ಡಿ.ಎನ್. ಸೊಲ್ಯೂಷನ್ಸ್’ (DN Solutions) ₹600 ಕೋಟಿ ಹೂಡಿಕೆಯಲ್ಲಿ ಸ್ಥಾಪಿಸಿರುವ ನೂತನ ತಯಾರಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಬುಧವಾರ ಚಾಲನೆ ನೀಡಿದರು.
ಕೇವಲ ಎರಡು ವರ್ಷಗಳ ಅಲ್ಪಾವಧಿಯಲ್ಲೇ ಈ ಯೋಜನೆ ಪೂರ್ಣಗೊಂಡು ಕಾರ್ಯಾರಂಭ ಮಾಡಿರುವುದು ಕರ್ನಾಟಕದ ಕೈಗಾರಿಕಾ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಉತ್ಪಾದನಾ ಆರ್ಥಿಕತೆಯತ್ತ ರಾಜ್ಯದ ದಾಪುಗಾಲು:
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, “ಎರಡು ವರ್ಷಗಳ ಹಿಂದೆ ಕೊರಿಯಾ ಪ್ರವಾಸದ ವೇಳೆ ಮಾಡಿಕೊಂಡ ಒಪ್ಪಂದವು ಇಷ್ಟು ಕ್ಷಿಪ್ರವಾಗಿ ಕಾರ್ಯರೂಪಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ತಯಾರಿಕೆ ಮತ್ತು ಆರ್ & ಡಿ ಘಟಕಗಳು ಒಂದೇ ಸೂರಿನಡಿ ಸ್ಥಾಪನೆಯಾಗಿರುವುದು ಅತ್ಯಂತ ವಿಶಿಷ್ಟ. ರಾಜ್ಯವು ಸೇವಾ ಆರ್ಥಿಕತೆಯಿಂದ ಉತ್ಪಾದನೆ ಆಧಾರಿತ ಆರ್ಥಿಕತೆಯಾಗಿ ಬದಲಾಗುತ್ತಿದೆ. ಆಟೋಮೊಬೈಲ್, ಹೆವಿ ಎಂಜಿನಿಯರಿಂಗ್, ಏರೋಸ್ಪೇಸ್, ಡಿಫೆನ್ಸ್ ಹಾಗೂ ಪ್ರಿಸಿಷನ್ ವಲಯಗಳಿಗೆ ಮಶೀನ್ ಟೂಲ್ಸ್ ಅತ್ಯಗತ್ಯ,” ಎಂದರು.


ದೇಶದ ಮಶೀನ್ ಟೂಲ್ಸ್ ವಲಯಕ್ಕೆ ರಾಜ್ಯದಿಂದ ಶೇ.52ರಷ್ಟು ಕೊಡುಗೆ:
“ಭಾರತದ ಒಟ್ಟಾರೆ ಮಶೀನ್ ಟೂಲ್ಸ್ ತಯಾರಿಕಾ ವಲಯದಲ್ಲಿ ಕರ್ನಾಟಕವೇ ಶೇ.52ರಷ್ಟು ಪಾಲು ಹೊಂದಿದೆ. ಹೀಗಾಗಿಯೇ ಜಾಗತಿಕ ಸಂಸ್ಥೆಗಳು ರಾಜ್ಯದತ್ತ ಮುಖ ಮಾಡುತ್ತಿವೆ. ಈ ನೂತನ ಘಟಕದಿಂದ ಈಗಾಗಲೇ 350 ಜನರಿಗೆ ಉದ್ಯೋಗಾವಕಾಶ ದೊರೆತಿದ್ದು, ಕಂಪನಿಯು ಜಾಗತಿಕ ಮಟ್ಟದ ಪೂರೈಕೆಯನ್ನು ಇಲ್ಲಿಂದಲೇ ನಿರ್ವಹಿಸುವುದರ ಜೊತೆಗೆ ಸ್ಥಳೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೆ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಕೈಜೋಡಿಸಬೇಕು,” ಎಂದು ಕರೆ ನೀಡಿದರು. ಸರ್ಕಾರದ ಸುಧಾರಿತ ಏಕಗವಾಕ್ಷಿ ನೀತಿ ಮತ್ತು ಕೈಗಾರಿಕಾ ಸೌಲಭ್ಯ ಕಾಯ್ದೆಗಳು ಹೂಡಿಕೆದಾರರಿಗೆ ಪೂರಕ ವಾತಾವರಣ ಸೃಷ್ಟಿಸಿವೆ ಎಂದರು.
ಡಿ.ಎನ್. ಸೊಲ್ಯೂಷನ್ಸ್ ಅಧ್ಯಕ್ಷ ವೊನ್ ಜಾಂಗ್ ಕಿಮ್ ಮಾತನಾಡಿ, “2035ರ ವೇಳೆಗೆ ಭಾರತದ ಮಶೀನ್ ಟೂಲ್ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕ್ರಾಫ್ಟ್ಸ್ ಮ್ಯಾನ್ ಆಟೊಮೇಷನ್ ಅಧ್ಯಕ್ಷ ಶ್ರೀನಿವಾಸನ್ ರವಿ, ಸಫರಾನ್ ಏರ್‌ಕ್ರಾಫ್ಟ್ ಎಂಜಿನ್ಸ್ ಎಂಡಿ ಅಶುತೋಷ್ ಕುಮಾರ್, ಫಾನುಕ್ ಕಾರ್ಪೊರೇಷನ್ ಅಧ್ಯಕ್ಷ ಕುಂಜ್ ಯಮಗುಜಿ ಹಾಗೂ ಉದ್ಯೋಗ ಮಿತ್ರ ಎಂಡಿ ದೊಡ್ಡ ಬಸವರಾಜ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕೊರಿಯಾ ಕೈಗಾರಿಕಾ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ. ಪಾಟೀಲ
ತುಮಕೂರು ಸಮೀಪ ಸ್ಥಾಪಿಸಲಾಗಿರುವ ‘ಜಪಾನ್ ಇಂಡಸ್ಟ್ರಿಯಲ್ ಟೌನ್‌ಶಿಪ್’ (ಜಪಾನ್ ಟೂಲ್ಸ್ ಪಾರ್ಕ್) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೆನ್ನಲ್ಲೇ, ಕೊರಿಯನ್ ಕಂಪನಿಗಳ ಹೂಡಿಕೆಗೆ ಉತ್ತೇಜನ ನೀಡಲು ಪ್ರತ್ಯೇಕ ‘ಕೊರಿಯಾ ಕೈಗಾರಿಕಾ ಪಾರ್ಕ್’ (Korea Industrial Park) ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಪ್ರಕಟಿಸಿದರು. ಈ ಪಾರ್ಕ್‌ನ ಸ್ಥಳವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕ್ರಾಫ್ಟ್ಸ್ ಮ್ಯಾನ್ ಅಟೊಮೇಷನ್ ಅಧ್ಯಕ್ಷ ಶ್ರೀನಿವಾಸನ್ ರವಿ, ಸಫರನ್ ಏರ್ ಕ್ರಾಫ್ಟ್ ಎಂಜಿನ್ಸ್ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್ ಕುಮಾರ್, ಫಾನುಕ್ ಕಾರ್ಪೊರೇಷನ್ ಅಧ್ಯಕ್ಷ ಕುಂಜ್ ಯಮಗುಜಿ ಮಾತನಾಡಿದರು.


















