ಬೆಂಗಳೂರು, ನ.22 www.bengaluruwire.com: ಸಿಲಿಕಾನ್ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನು ರಚಿಸಿದ ಬೆನ್ನಲ್ಲೇ, ರೌಡಿಸಂ ಹಾಗೂ ಅಪರಾಧ ಚಟುವಟಿಕೆಗಳ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದಾರೆ.
ಮುಖ್ಯಮಂತ್ರಿಗಳ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಗರದಾದ್ಯಂತ ರೌಡಿಶೀಟರ್‌ಗಳ ಮನೆಗಳ ಮೇಲೆ ರೌಡಿ ನಿಗ್ರಹ ದಳ (Anti-Rowdy Squad) ಮತ್ತು ಆಯಾ ವಲಯದ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಸಿಎಂ ಸಭೆ ಬೆನ್ನಲ್ಲೇ ಚುರುಕುಗೊಂಡ ಖಾಕಿ ಪಡೆ
ಶುಕ್ರವಾರ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು, ನಗರದಲ್ಲಿ ರೌಡಿಸಂ ಅನ್ನು ಸಂಪೂರ್ಣವಾಗಿ ಮಟ್ಟಹಾಕುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಸಭೆಯಲ್ಲಿ ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತ (Chief Commissioner) ಆರ್. ಹಿತೇಂದ್ರ, ರೌಡಿ ನಿಗ್ರಹ ದಳದ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಸೇರಿದಂತೆ ಐದು ವಲಯಗಳ ಆಯುಕ್ತರು ಭಾಗವಹಿಸಿದ್ದರು.

ನಾಗರಿಕರಿಗೆ ನೇರ ಲಾಭ ಸಿಗಬೇಕು: ಮುಖ್ಯ ಆಯುಕ್ತ ಆರ್. ಹಿತೇಂದ್ರ
ನಗರದ ಪೊಲೀಸ್ ವ್ಯವಸ್ಥೆಯನ್ನು ಐದು ಕಮಿಷನರೇಟ್‌ಗಳಾಗಿ ವಿಭಜಿಸಿರುವ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅವರು, “ಜನಸಂಖ್ಯೆ ಮತ್ತು ವ್ಯಾಪ್ತಿಗೆ ಅನುಗುಣವಾಗಿ ಆಡಳಿತವನ್ನು ವಿಕೇಂದ್ರೀಕರಿಸಲಾಗಿದೆ. ಇದರಿಂದ ಪೊಲೀಸರ ವಿಸಿಬಲ್ ಪೊಲೀಸಿಂಗ್ (Visible Policing) ಹೆಚ್ಚಾಗಲಿದ್ದು, ಸಾರ್ವಜನಿಕರಿಗೆ ತ್ವರಿತ ಸೇವೆ ಸಿಗಲಿದೆ. ಠಾಣೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಅಥವಾ ರಿಯಲ್ ಎಸ್ಟೇಟ್ ಸೆಟಲ್‌ಮೆಂಟ್‌ಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನಿಗೆ ಸವಾಲು ಹಾಕಿದರೆ ನೆಮ್ಮದಿ ಕೆಡಿಸುತ್ತೇವೆ: ಡಾ. ಪಿ.ಎಸ್. ಹರ್ಷ
ಪೂರ್ವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ರೌಡಿಶೀಟರ್‌ಗಳ ಮನೆಗಳ ಮೇಲಿನ ದಾಳಿಯ ನೇತೃತ್ವ ವಹಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಮುಖ್ಯಮಂತ್ರಿಗಳು, ಗೃಹ ಸಚಿವರು, ಡಿಜಿ-ಐಜಿಪಿ ಹಾಗೂ ಮುಖ್ಯ ಆಯುಕ್ತ ಆರ್. ಹಿತೇಂದ್ರ ಮತ್ತು ಹೇಮಂತ್ ನಿಂಬಾಳ್ಕರ್ ಅವರ ಮಾರ್ಗದರ್ಶನದಲ್ಲಿ ಇಂದು ಮೊದಲ ಹಂತದ ಕಾರ್ಯಾಚರಣೆ ಆರಂಭಿಸಿದ್ದೇವೆ” ಎಂದು ತಿಳಿಸಿದರು.
ಪೂರ್ವ ವಲಯದ ಅಂಕಿಅಂಶ: ಪೂರ್ವ ವಿಭಾಗದಲ್ಲಿ ಒಟ್ಟು 325 ರೌಡಿಶೀಟರ್‌ಗಳಿದ್ದು, ಈ ಪೈಕಿ 304 ಮಂದಿ ನಿಯಮಿತವಾಗಿ ಪೊಲೀಸ್ ಮತ್ತು ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ.
ಗಂಭೀರ ಅಪರಾಧಿಗಳೇ ಟಾರ್ಗೆಟ್: ಕೊಲೆ, ಸುಲಿಗೆ (Extortion), ಮಚ್ಚು-ಲಾಂಗ್ ಹಿಡಿದು ಓಡಾಡುವಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರನ್ನು ಮೊದಲ ಆದ್ಯತೆಯಾಗಿ ಗುರಿಯಾಗಿಸಲಾಗಿದೆ. ಕಾನೂನು ಪಾಲಿಸುವವರಿಗೆ ಅಥವಾ ರೌಡಿಗಳ ಕುಟುಂಬದ ಮಹಿಳೆಯರಿಗೆ ಅನಗತ್ಯ ತೊಂದರೆ ನೀಡದಂತೆ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ವಾರೆಂಟ್ ಜಾರಿ: “ಯಾವುದೇ ರೌಡಿಶೀಟರ್ ನ್ಯಾಯಾಲಯದ ವಿಚಾರಣೆಗೆ ಗೈರಾಗಲು ಬಿಡುವುದಿಲ್ಲ. ಬಾಕಿ ಇರುವ ವಾರೆಂಟ್‌ಗಳನ್ನು ಶೇ. 100ರಷ್ಟು ಜಾರಿಗೊಳಿಸುತ್ತೇವೆ. ಕಾನೂನಿಗೆ ಸವಾಲು ಹಾಕುವವರ ನೆಮ್ಮದಿಯನ್ನು ಕಾನೂನಾತ್ಮಕವಾಗಿಯೇ ಕೆಡಿಸುತ್ತೇವೆ” ಎಂದು ಡಾ. ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಐದು ಕಮಿಷನರೇಟ್‌ಗಳ ವ್ಯಾಪ್ತಿಯಲ್ಲೂ ರೌಡಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ.

















